ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಲು ಸಹಯೋಗ: ತೇಜಸ್ವಿ ಸೂರ್ಯ ನಡೆಗೆ ಆಕ್ರೋಶ

Last Updated 25 ಮೇ 2021, 21:19 IST
ಅಕ್ಷರ ಗಾತ್ರ

ಬೆಂಗಳೂರು: ಲಸಿಕೆಗೆ ಬೇಡಿಕೆಗೆ ಹೆಚ್ಚುತ್ತಿದ್ದಂತೆಯೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಾಸವಿ ಆಸ್ಪತ್ರೆಯ ಸಹಯೋಗದೊಂದಿಗೆ ಜಯನಗರ 5ನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಜುಲೈವರೆಗೆ ಲಸಿಕೆ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದಾರೆ. ಇಲ್ಲಿ ₹ 900ಕ್ಕೆ ಕೋವಿಶೀಲ್ಡ್ ಲಸಿಕೆ ಒದಗಿಸಲಾಗುತ್ತದೆ. ಉಚಿತವಾಗಿ ಲಸಿಕೆ ಕೊಡಿಸುವ ಬದಲು ಸಂಸದರು ಲಸಿಕೆ ಮಾರಾಟಕ್ಕೆ ಮಾರುಕಟ್ಟೆ ಒದಗಿಸುತ್ತಿದ್ದಾರೆ ಎಂಬ ಟೀಕೆಯೂ ವ್ಯಕ್ತವಾಗಿದೆ.

‘ಈಗಾಗಲೇ ನೋಂದಣಿ ಪ್ರಾರಂಭ ಮಾಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ನೀಡಲು 15 ಸಾವಿರ ಲಸಿಕೆ ಲಭ್ಯ ಇದೆ’ ಎಂದು ಆಸ್ಪತ್ರೆ ಹೇಳಿಕೊಂಡಿದೆ.

‘ಸಂಸದರ ಸಹಯೋಗದಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆ ಅಭಿಯಾನದಲ್ಲಿ ಪ್ರತಿ ಡೋಸ್‌ಗೆ ₹ 900 ಪಾವತಿಸಬೇಕು ಎನ್ನಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಅಧಿಕ ಶುಲ್ಕ ಪಾವತಿಸಿ, ಎಲ್ಲರಿಗೂ ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ. ತಮ್ಮ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಉಚಿತವಾಗಿ ಲಸಿಕೆ ಒದಗಿಸಬೇಕು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದೊರೆಯುತ್ತಿಲ್ಲ. ಆದರೆ, ಖಾಸಗಿ ಕೇಂದ್ರಗಳಿಗೆ ಲಸಿಕೆ ಪೂರೈಕೆಯಾಗುತ್ತಿದೆ. ಇದು ಹೇಗೆ ಸಾಧ್ಯ’ ಎಂದುಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ್ ಅಯ್ಯರ್ ಪ್ರಶ್ನಿಸಿದರು.

’ಖಾಸಗಿ ಕ್ಷೇತ್ರದಲ್ಲಿ ಈ ರೀತಿ ಲಸಿಕೆಗಳನ್ನು ನೀಡುವುದು ಸಂವಿಧಾನದ ಅನುಚ್ಛೇದ 14ರ ಸ್ಪಷ್ಟ ಉಲ್ಲಂಘನೆ. ಸಮಾಜದಲ್ಲಿ ತಾರತಮ್ಯ ಇರಬಾರದು ಎಂದು 15ನೇ ಅನುಚ್ಚೇದ ಹೇಳುತ್ತದೆ. ಸಂಸದರ ಈ ನಡೆ ಸಂವಿಧಾನ ವಿರೋಧಿ‘ ಎಂದು ವಕೀಲ ವಿನಯ್‌ ಶ್ರೀನಿವಾಸ್‌ ಪ್ರತಿಪಾದಿಸಿದರು.

’ಪೋಲಿಯೊ ಲಸಿಕೆ ಸೇರಿದಂತೆ ಈ ಹಿಂದೆ ಯಾವುದೇ ಲಸಿಕೆಗೆ ಹಣ ವಸೂಲಿ ಮಾಡಿಲ್ಲ. ಸಚಿವರು ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಆದ್ಯತೆ ನೀಡಬೇಕಿತ್ತು. ಅದರ ಬದಲು ದುಬಾರಿ ದರದಲ್ಲಿ ಶ್ರೀಮಂತರಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಕ್ಷೇತ್ರದ ಒಬ್ಬನೇ ಒಬ್ಬ ಕೊಳೆಗೇರಿ ನಿವಾಸಿಗೆ ಸಂಸದರು ಈವರೆಗೆ ಲಸಿಕೆ ಕೊಡಿಸಿಲ್ಲ. ಅದರ ಕೊರತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಂದೇ ಒಂದು ಪತ್ರ ಬರೆದಿಲ್ಲ. ಇದು ಸಂಸದರ ಘೋರ ವೈಫಲ್ಯ. ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

’ಜನರು ಜೀವ ಉಳಿಸಲು ಉಚಿತವಾಗಿ ಲಸಿಕೆ ನೀಡಬೇಕು ಎಂದು ಹೈಕೋರ್ಟ್‌ ಸಹ ಹೇಳಿದೆ. ಆದರೆ, ಸಂಸದರು ಖಾಸಗಿ ಆಸ್ಪತ್ರೆ ಜತೆಗೆ ಸಹಯೋಗ ಮಾಡಿ ಜನರ ಸುಲಿಗೆ ಮಾಡಲು ಅವಕಾಶ ಕಲ್ಪಿಸಿದ್ದಾರೆ‘ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತೇಜಸ್ವಿ ಸೂರ್ಯ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT