ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆ ಡೋಸ್: ಲಸಿಕೆಯ ದರ ಇಳಿಕೆಯಾದರೂ ಖರೀದಿಸಿದ್ದ ದರದಲ್ಲೇ ಮಾರಾಟ

ಪ್ರತಿ ಲಸಿಕೆಗೆ ₹ 630 ರಿಂದ ₹ 1,410 ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳು
Last Updated 9 ಏಪ್ರಿಲ್ 2022, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ದರವನ್ನು ತಯಾರಿಕಾ ಕಂಪನಿಗಳು ಶನಿವಾರ ₹ 225ಕ್ಕೆ ಇಳಿಕೆ ಮಾಡಿವೆ. ಆದರೂ ಈ ಹಿಂದೆ ಖರೀದಿಸಿದ ದರದಲ್ಲೇ ಲಸಿಕೆ ವಿತರಿಸಲುನಗರದ ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ. ಹೀಗಾಗಿ, ಒಂದು ಡೋಸ್‌ ಲಸಿಕೆಗೆ ಸಾರ್ವಜನಿಕರು ₹ 630 ರಿಂದ ₹1,410 ವರೆಗೆ ಹಣ ಪಾವತಿಸಬೇಕಾಗುತ್ತದೆ.

ಭಾನುವಾರದಿಂದ 18 ವರ್ಷಗಳು ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್‌ ಲಸಿಕೆಗಳನ್ನು ಖಾಸಗಿ ಲಸಿಕಾ ಕೇಂದ್ರಗಳಿಗೆ ಈ ಹಿಂದೆ ಕ್ರಮವಾಗಿ ₹ 600 ಹಾಗೂ ₹ 1,200ಕ್ಕೆ ಪೂರೈಸಲಾಗಿತ್ತು.

ಕೋವಿಡ್ ಮೂರನೇ ಅಲೆ ನಿಯಂತ್ರಣದ ಬಳಿಕ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಇಳಿಮುಖವಾಗಿದೆ. ಇದರಿಂದಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಖರೀದಿಸಿದ್ದ ಲಸಿಕೆಯ ದಾಸ್ತಾನು ಹಾಗೆಯೇ ಉಳಿದಿದೆ. ಆದ್ದರಿಂದ ಖರೀದಿಸಿದ ದರಕ್ಕೇ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ವಿತರಿಸಲು ಖಾಸಗಿ ಆಸ್ಪತ್ರೆಗಳು ‘ಕೋವಿನ್’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿವೆ.

ಕೋವಿಡ್ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಗಳು ದಾಟಿದವರಿಗೆ ಉಚಿತವಾಗಿ ಸರ್ಕಾರಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಒದಗಿಸಲಾಗುತ್ತಿದೆ. ಉಳಿದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬೇಕಿದೆ.

ನಗರದ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು ₹ 630 ರಿಂದ ₹ 780ರ ವರೆಗೆ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ₹ 1,050 ರಿಂದ ₹ 1,410ರ ವರೆಗೆ ಒದಗಿಸುತ್ತಿವೆ. ಇದರಲ್ಲಿ ಸೇವಾ ಶುಲ್ಕವೂ ಸೇರಿದೆ. ಮುನ್ನೆಚ್ಚರಿಕೆ ಡೋಸ್ ಲಸಿಕೆಗೂ ಆಸ್ಪತ್ರೆಗಳು ‘ಕೋವಿನ್’ ಪೋರ್ಟಲ್‌ನಲ್ಲಿ ಇದೇ ದರವನ್ನು ನಮೂದಿಸಿವೆ.

ದರದಲ್ಲಿ ವ್ಯತ್ಯಾಸ:18 ವರ್ಷಗಳು ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಬುಕ್ ಮಾಡಲು ಕೋವಿನ್ ಪೋರ್ಟಲ್‌ನಲ್ಲಿ ಅವಕಾಶ ನೀಡಲಾಗಿದೆ.ಯುನೈಟೆಡ್, ಮದರ್‌ಹುಡ್, ಲೋಟಸ್ ಡೈಗ್ನಾಸ್ಟಿಕ್ ಸೆಂಟರ್, ಕುಂದಲಹಳ್ಳಿಯ ಅಪೋಲೊ ಕ್ರೆಡಲ್ ಬ್ರೂಕ್‌ ಫೀಲ್ಡ್, ಫೋರ್ಟಿಸ್, ದೇವ್‌ ಹೆಲ್ತ್‌ಕೇರ್ ಸೆಂಟರ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ‘ಕೋವಿಶೀಲ್ಡ್‌’ ಲಸಿಕೆಗೆ ₹ 780 ದರ ನಿಗದಿ ಮಾಡಲಾಗಿದೆ. ನಾರಾಯಣ ಹೃದಯಾಲಯದಲ್ಲಿ ₹ 630 ಹಾಗೂ ಅಪೋಲೊ ಮೆಡಿಕಲ್ ಸೆಂಟರ್‌ನಲ್ಲಿ ₹ 700 ದರ ಇದೆ.

ಅಪೋಲೊ ಕ್ಲಿನಿಕ್, ಸ್ಪಿಂಗ್‌ಲಿಪ್ ಹೆಲ್ತ್‌ಕೇರ್, ಕ್ಲೌಡ್‌ನೈನ್, ಟೋಟಲ್ ಆರ್ಥೋಕೇರ್, ಯುನೈಟೆಡ್‌, ಮಣಿಪಾಲ್, ಆಸ್ಟರ್ ಮಾನ್ಯತಾ ಕ್ಲಿನಿಕ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ‘ಕೋವ್ಯಾಕ್ಸಿನ್’ ಲಸಿಕೆಗೆ ₹ 1,410 ನಿಗದಿಪಡಿಸಲಾಗಿದೆ.ಮದರ್‌ಹುಡ್, ಶ್ರೀಸಾಯಿ, ಫೋರ್ಟಿಸ್ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ₹ 1,200 ನಿಗದಿಪಡಿಸಲಾಗಿದೆ.ನಾರಾಯಣ ಹೃದಯಾಲಯದಲ್ಲಿ ₹ 1,050 ಇದೆ.

ಖಾಸಗಿ ಆಸ್ಪತ್ರೆ: ಮುನ್ನೆಚ್ಚರಿಕೆ ಡೋಸ್ ಇಂದಿನಿಂದ

18 ವರ್ಷ ಮೇಲ್ಪಟ್ಟವರಿಗೆ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರದಿಂದ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ವಿತರಣೆ ಮಾಡಲಾಗುತ್ತದೆ.

ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರು ಮುನ್ನೆಚ್ಚರಿಕೆ ಡೋಸ್ ಪಡೆಯಬಹುದಾಗಿದೆ. 18 ವರ್ಷ ಮೇಲ್ಪಟ್ಟವರಲ್ಲಿ 4.97 ಕೋಟಿ ಮಂದಿ ಮೊದಲ ಡೋಸ್ ಹಾಗೂ 4.76 ಕೋಟಿ ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಮೊದಲ ಹಾಗೂ ಎರಡನೇ ಡೋಸ್‌ ವಿತರಣೆಗೆ ನಿಗದಿಪಡಿಸಲಾದ ಗುರಿಯಲ್ಲಿ ಕ್ರಮವಾಗಿ ಶೇ 101.8 ರಷ್ಟು ಹಾಗೂ ಶೇ 97.4 ರಷ್ಟು ಸಾಧನೆಯಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ವಿತರಿಸಲಾಗುತ್ತಿದ್ದು, 14.24 ಲಕ್ಷ ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.

12ರಿಂದ 14 ವರ್ಷದವರಲ್ಲಿ 13.82 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 15 ರಿಂದ 17 ವರ್ಷದವರಲ್ಲಿ 25.11 ಲಕ್ಷ ಮಂದಿ ಮೊದಲ ಡೋಸ್ ಹಾಗೂ 20.52 ಲಕ್ಷ ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

***

ಈ ಹಿಂದೆ ಖರೀದಿಸಿದ ಲಸಿಕೆಯ ದಾಸ್ತಾನು ಆಸ್ಪತ್ರೆಗಳಲ್ಲಿ ಹಾಗೆಯೇ ಉಳಿದಿದೆ. ಅದನ್ನು ಕಡಿಮೆ ದರಕ್ಕೆ ನೀಡಿದರೆ ಆಸ್ಪತ್ರೆಗಳಿಗೆ ನಷ್ಟವಾಗುತ್ತದೆ. ಹಾಗಾಗಿ, ಖರೀದಿಸಿದ ದರಕ್ಕೆ ಆಸ್ಪತ್ರೆಗಳು ಒದಗಿಸುತ್ತವೆ.

– ಡಾ. ಪ್ರಸನ್ನ ಎಚ್.ಎಂ., ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT