ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಮುದಾಯ ಆಧರಿತ ಕಣ್ಗಾವಲಿಗೆ ಬಿಬಿಎಂಪಿ ಕ್ರಮ

Last Updated 21 ಫೆಬ್ರುವರಿ 2021, 21:39 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ಪತ್ತೆಯಾದರೆ ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಬಳಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ಅಧಿಕಾರಿಗಳು ನಾಗರಿಕರ ಸಹಕಾರದಿಂದ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಬೇಕು. ಇದರಿಂದ ಯಾವುದೇ ಕ್ಲಸ್ಟರ್‌ನಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾದರೆ ತಕ್ಷಣವೇ ನಿಯಂತ್ರಣ ಕಾರ್ಯ ಕೈಗೊಳ್ಳುವುದು ಸುಲಭವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಆರೋಗ್ಯ ಸಂರಕ್ಷಣೆ ವ್ಯವಸ್ಥೆ ಬಲಪಡಿಸಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ (ಆರ್‌ಡಬ್ಲ್ಯುಎ) ಜೊತೆ ಸಭೆ ನಡೆಸಬೇಕು. ಕೋವಿಡ್‌ ಹರಡುವಿಕೆಯ ಸರಪಣಿಯನ್ನು ತುಂಡರಿಸಲು ಅವರ ನೆರವನ್ನು ಪಡೆಯಬೇಕು. ಸೋಂಕಿತರ ಜೊತೆ ನೇರ ಮತ್ತು ಪರೋಕ್ಷ ಸಂಪರ್ಕಕ್ಕೆ ಬಂದವರ ಪತ್ತೆಗೆ ಆರ್‌ಡಬ್ಲ್ಯುಎಗಳ ಅಥವಾ ಇತರ ಸಾಮುದಾಯಿಕ ಸಂಘಟನೆಗಳ ಪ್ರತಿನಿಧಿಗಳ ನೆರವನ್ನು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಬಳಗಗಳ ಬಳಸಿಕೊಳ್ಳಬೇಕು. ಕೋವಿಡ್‌ ಹರಡುವಿಕೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕುವಲ್ಲಿಯೂ ಇವುಗಳು ನೆರವಾಗಬಲ್ಲವು’ ಎಂದು ಅವರು ತಿಳಿಸಿದ್ದಾರೆ.

ನಾಲ್ಕು ಗೋಡೆಗಳ ನಡುವಿನ ವ್ಯವಸ್ಥೆಗಳಲ್ಲೂ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂಬ ಬಗ್ಗೆಯೂ ನಿಗಾ ಇಡಬೇಕು. ಕಲ್ಯಾಣ ಮಂಟಪಗಳು, ಮದುವೆ ಸಭಾಂಗಣ, ಕಾರಾಗೃಹ, ವಸತಿ ಕಟ್ಟಡ, ವಿಶ್ರಾಂತ ಜೀವನ ನಡೆಸುವ ಸಮುದಾಯಗಳು, ವೃದ್ಧಾಶ್ರಮ, ಅಂಗವಿಕಲರ ಆಶ್ರಯ ತಾಣಗಳಲ್ಲಿನ ವ್ಯವಸ್ಥೆಗಳ ಮೇಲೂ ನಿಗಾ ಇಡಬೇಕು. ಕೋವಿಡ್‌ ಪತ್ತೆಯಾದ ಕಡೆ ಇನ್ನೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ರೂಪಾಂತರಗೊಂಡ ಕೊರೊನಾ ಸೋಂಕು ಪತ್ತೆಯಾದರೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಅವುಗಳ ಹರಡುವಿಕೆ ಬಗ್ಗೆ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆಯೂ ಆಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT