ಭಾನುವಾರ, ಆಗಸ್ಟ್ 14, 2022
21 °C
ಇನ್ನು ಉದ್ದಿಮೆ, ಸಂಸ್ಥೆಗಳ ವಿರುದ್ಧವೂ ಕ್ರಮ: ಬಿಬಿಎಂಪಿ

ಕೋವಿಡ್‌ ನಿಯಂತ್ರಣ ನಿಯಮ ಉಲ್ಲಂಘನೆ: ಹೋಟೆಲ್‌, ಮಳಿಗೆಗಳಿಗೆ ₹ 1 ಲಕ್ಷದವರೆಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಿಯಂತ್ರಣ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮ ಉಲ್ಲಂಘಿಸುವ ಹೋಟೆಲ್‌ ಹಾಗೂ ಉದ್ದಿಮೆಗಳಿಗೆ ₹ 5 ಸಾವಿರದಿಂದ ₹ 1 ಲಕ್ಷದವರೆಗೆ ದಂಡವಿಧಿಸಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಹರಡದಂತೆ ತಡೆಯಲು ಜನರು ಪರಸ್ಪರ ಅಂತರ ಕಾಪಾಡುವುದನ್ನು ಹಾಗೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕವೇ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಬೇಕು.

‘ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನ ಆಧಾರದಲ್ಲಿ ಅಂಗಡಿ ಮಳಿಗೆಗಳು, ಮಾಲ್‌ಗಳು ಹೋಟೆಲ್‌ ರೆಸ್ಟೋರಂಟ್‌, ಕಲ್ಯಾಣ ಮಂಟಪ, ಚಿತ್ರಮಂದಿರಗಳ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಬಹುತೇಕ ಕಡೆ ಕೋವಿಡ್‌ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಇದುವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ಹಾಗೂ ಸುರಕ್ಷಿತ ಅಂತರ ಕಾಪಾಡದವರಿಗೆ ವ್ಯಕ್ತಿಗತವಾಗಿ ದಂಡ ಹಾಕಲಾಗುತ್ತಿತ್ತು. ಇನ್ನು ಉದ್ದಿಮೆಗಳು ಹಾಗೂ ಸಂಸ್ಥೆಗಳ ಮಾಲೀಕರಿಗೂ ದಂಡ ವಿಧಿಸಲು ಬಿಬಿಎಂಪಿ ಆರೋಗ್ಯ ನಿರೀಕ್ಷಕರು ಹಾಗೂ ಮಾರ್ಷಲ್‌ಗಳು ಕ್ರಮಕೈಗೊಳ್ಳಲಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲ್‌ಗಳಲ್ಲಿ ಪ್ರವೇಶ ದ್ವಾರದ ಬಳಿ ಮಾತ್ರ ಸ್ಯಾನಿಟೈಸ್‌ ನೀಡುವ ಹಾಗೂ ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಗುತ್ತದೆ. ಗ್ರಾಹಕರು ಮಾಲ್‌ಗಳ ಒಳಗೆ ಹೋದ ಬಳಿಕ ಮಾಸ್ಕ್‌ ಧರಿಸುವಿಕೆ ಹಾಗೂ ಅಂತರ ಕಾಪಾಡುವುದರ ಮೇಲೆ ನಿಗಾ ಇಡುವ ವ್ಯವಸ್ಥೆಗಳಿಲ್ಲ. ಹೋಟೆಲ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳಲ್ಲೂ ಗ್ರಾಹಕರು ಅಂತರ ಕಾಪಾಡುವುದಕ್ಕೆ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಕೆಲವು ದೇವಸ್ಥಾನಗಳಲ್ಲೂ ಭಾರಿ ಜನಜಂಗುಳಿ ಕಂಡುಬರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಚಳಿಗಾಲದಲ್ಲಿ ಕೋವಿಡ್‌ ಹರಡುವ ಸಾಧ್ಯತೆ ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ. ಹೆಚ್ಚು ಜನ ಒಂದೇ ಕಡೆ ಸೇರುವ ಹೋಟೆಲ್‌, ಮಾಲ್‌, ಚಿತ್ರಮಂದಿರ, ಸಭಾಂಗಣಗಳು, ಕಲ್ಯಾಣಮಂಟಪಗಳಲ್ಲಿ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಾರದೇ ಹೋದರೆ, ಇವುಗಳೇ ಈ ಸೋಂಕನ್ನು ವ್ಯಾಪಕವಾಗಿ ಹಬ್ಬಿಸುವ ತಾಣಗಳಾಗುವ ಅಪಾಯವಿದೆ. ಸ್ವಲ್ಪ ಅಸಡ್ಡೆ ವಹಿಸಿದರೂ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದರು.  

‘ಸಮಾರಂಭಗಳಲ್ಲಿ ನಿಯಮ ಕಡೆಗಣನೆ’

ಲಾಕ್‌ಡೌನ್‌ ತೆರವಾದ ಬಳಿಕ ಮದುವೆ ಮತ್ತಿತರ ಸಮಾರಂಭಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳ ಕಂಡಿದೆ. ಸಮಾರಂಭದಲ್ಲಿ ಹೋಟೆಲ್‌ ಅಥವಾ ಕಲ್ಯಾಣ ಮಂಟಪಗಳ ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಮಂದಿ ಅಥವಾ ಗರಿಷ್ಠ 200 ಮಂದಿ ಭಾಗವಹಿಸುವುದಕ್ಕೆ ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ.

‘ಸಮಾರಂಭಗಳಲ್ಲಿ ಅನುಮತಿ ಪಡೆದುದಕ್ಕಿಂತ ಹೆಚ್ಚು ಜನ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ತಾರಾ ಹೋಟೆಲ್‌ಗಳಲ್ಲಿ ಒಂದೇ ದಿನದಲ್ಲಿ ಐದಾರು ಮದುವೆಗಳು ನಡೆಯುತ್ತಿವೆ.ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಡೆಗಣಿಸಲಾಗುತ್ತಿದೆ. ಮದುವೆ ಸಮಾರಂಭಕ್ಕೆ  ಅನುಮತಿ ಪಡೆಯುವವರ ಜೊತೆಗೆ ಇವುಗಳಿಗೆ ಸ್ಥಳಾವಕಾಶ ಕಲ್ಪಿಸುವ ಹೋಟೆಲ್‌ಗಳು, ಕಲ್ಯಾಣ ಮಂಟಪಗಳ ಮಾಲೀಕರಿಗೂ ಈ ಬಗ್ಗೆ ಜವಾಬ್ದಾರಿ ಇದೆ. ಅವರು ತನ್ನ ಹೊಣೆಯನ್ನು ಸರಿಯಾಗಿ ನಿಭಾಯಿಸದೇ ಇದ್ದಾಗ ದಂಡ ವಿಧಿಸುವುದು ಅನಿವಾರ್ಯ’ ಎಂದು ಆಯುಕ್ತರು ತಿಳಿಸಿದರು.

ಯಾವುದಕ್ಕೆ ಎಷ್ಟು ದಂಡ?

ಉದ್ದಿಮೆ; ದಂಡದ ಮೊತ್ತ (₹ ಗಳಲ್ಲಿ)

ಸ್ವಸಹಾಯ ಪದ್ಧತಿಯ ಹೋಟೆಲ್, ದರ್ಶಿನಿ, ಆಹಾರ ಮಳಿಗೆ, ಸಣ್ಣ ಅಂಗಡಿ, ಮಳಿಗೆ, ಬೀದಿಬದಿಯಲ್ಲಿ ತ್ವರಿತ ಆಹಾರ ಪೂರೈಸುವ ಮಳಿಗೆಗಳು; 5,000

ಹವಾನಿಯಂತ್ರಣ ವ್ಯವಸ್ಥೆರಹಿತ ರೆಸ್ಟೋರಂಟ್‌, ಪಾರ್ಟಿ ಹಾಲ್‌, ಅಂಗಡಿ/ಮಳಿಗೆ, ಡಿಪಾರ್ಟ್‌ಮೆಂಟಲ್‌ ಸ್ಟೋರ್‌, ಖಾಸಗಿ ಬಸ್‌ನಿಲ್ದಾಣ, ಇತರ ಸಾರ್ವಜನಿಕ ಸ್ಥಳ; 25,000

ಹವಾನಿಯಂತ್ರಿತ ರೆಸ್ಟೋರಂಟ್‌, ಪಾರ್ಟಿ ಹಾಲ್‌, ಅಂಗಡಿ/ ಮಳಿಗೆ, ಡಿಪಾರ್ಟ್‌ಮೆಂಟಲ್‌ ಸ್ಟೋರ್ಸ್‌, ಬ್ರ್ಯಾಂಡೆಡ್‌ ಮಳಿಗೆ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ಶಾಪಿಂಗ್‌ ಮಾಲ್‌ ಮತ್ತು ಇತರ ಸಾರ್ವಜನಿಕ ಸ್ಥಳ; 50,000

3 ಮತ್ತು ಅದಕ್ಕಿಂತ ಹೆಚ್ಚು ತಾರಾ ಮೌಲ್ಯದ ಹೋಟೆಲ್‌, 500 ಅಥವಾ ಅದಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ಕಲ್ಯಾಣ ಮಂಟಪ, ಸಮುದಾಯ ಭವನ ಅಥವಾ ಸಾರ್ವಜನಿಕ ಸ್ಥಳ; ₹ 1 ಲಕ್ಷ

ಸಾರ್ವಜನಿಕ ಸಭೆ,ಸಮಾರಂಭ, ಕಾರ್ಯಕ್ರಮ, ರ‍್ಯಾಲಿ ಕೂಟ, ಆಚರಣೆಗಳ ಆಯೋಜಕರು; 50,000

ಈ ಪಟ್ಟಿಯಲ್ಲಿರದ ಇತರ ಸಾರ್ವಜನಿಕ ಸ್ಥಳಗಳು; 10,000ಕ್ಕಿಂತ ಹೆಚ್ಚು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು