ಗುರುವಾರ , ಸೆಪ್ಟೆಂಬರ್ 23, 2021
21 °C
ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಕೇಂದ್ರ ಸಚಿವ ಕಿವಿಮಾತು

ಕೋವಿಡ್ ಅನ್ನು ನಿರ್ಲಕ್ಷ್ಯ ಮಾಡಿದಲ್ಲಿ ಮತ್ತೆ ಅಪಾಯ: ರಾಜೀವ್ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಅಂತಿಮ ಘಟ್ಟದಲ್ಲಿದ್ದೇವೆ. ಈ ವೇಳೆ ನಿರ್ಲಕ್ಷ್ಯ ಮಾಡಿದಲ್ಲಿ ಮತ್ತೆ ಅಪಾಯದ ಪರಿಸ್ಥಿತಿಯನ್ನು ತಂದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಬದಲಾವಣೆಗೆ ಹೊಂದಿಕೊಂಡು ಸಾಗಬೇಕು’ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಿವಿಮಾತು ಹೇಳಿದರು.

‘ನಮ್ಮ ಬೆಂಗಳೂರು ಪ್ರತಿಷ್ಠಾನ’ವು ಕೋವಿಡ್‌ 3ನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನಿರೀಕ್ಷಿತಾಗಿ ಕಾಣಿಸಿಕೊಂಡ ಈ ಸಾಂಕ್ರಾಮಿಕ ಕಾಯಿಲೆ ಎಲ್ಲ ವಲಯಗಳಿಗೂ ಹೊಡೆತ ನೀಡಿದೆ. ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚಿನ ಅಪಾಯವನ್ನು ತಂದೊಡ್ಡಿತು. ವಿದೇಶಗಳು ಕೂಡ ಇದಕ್ಕೆ ಹೊರತಾಗಿಲ್ಲ. ಪಂಜಾಬ್, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ದಿಢೀರ್ ಏರಿಕೆಯಾಗಲು ಅಲ್ಲಿನ ರಾಜ್ಯ ಸರ್ಕಾರಗಳ ವೈಫಲ್ಯವೂ ಕಾರಣ’ ಎಂದರು.

‘ಇನ್ನಷ್ಟು ದಿನ ನಾವು ವೈರಾಣುವಿನ ನಡುವೆಯೇ ಬದುಕಬೇಕಿದೆ. ಹಾಗಾಗಿ, ಮೈಮರೆಯಬಾರದು. ರೋಗವು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಸೌಲಭ್ಯ ಒದಗಿಸಲು ಸಾಧ್ಯವಾಗದು: ಎಚ್‌ಸಿಜಿ ಆಸ್ಪತ್ರೆಯ ಸೆಂಟರ್ ಆಫ್ ಅಕಾಡೆಮಿಕ್ ರಿಸರ್ಚ್‌ನ ಡೀನ್ ಡಾ. ವಿಶಾಲ್ ರಾವ್, ‘ಕೋವಿಡ್ ಎರಡನೇ ಅಲೆ ಹಲವು ಪಾಠಗಳನ್ನು ಕಲಿಸಿದೆ. ವೈರಾಣು ಕಾಲಕಾಲಕ್ಕೆ ರೂಪಾಂತರಗೊಳ್ಳಲಿದೆ. ಈ ಸೋಂಕಿನ ವಿರುದ್ಧ ವೈದ್ಯಕೀಯ ವಲಯ ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದೆ. ಆಸ್ಪತ್ರೆಗಳನ್ನು ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ನಿರ್ಮಿಸಲಾಗುತ್ತದೆ. ಎಲ್ಲರೂ ರೋಗಿಗಳಾಗುತ್ತಾ ಹೋದಲ್ಲಿ ಸೌಲಭ್ಯ ಒದಗಿಸಲು ಯಾರಿಂದಲೂ ಸಾಧ್ಯವಾಗದು’ ಎಂದರು.

ಶ್ವಾಸಕೋಶ ತಜ್ಞ ಡಾ. ವಿವೇಕ್ ಪಡೆಗಲ್, ‘ಹಾಸಿಗೆ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎರಡನೇ ಅಲೆಯಲ್ಲಿ ಎದುರಿಸಿದ್ದೇವೆ. ಈ ಹಿಂದೆ ಎದುರಿಸಿದ ಸಮಸ್ಯೆಗಳನ್ನು ಜನ ಮರೆಯುತ್ತಿರುವುದು ವಿಪರ್ಯಾಸ. ಲಸಿಕೆಯನ್ನು ಆದಷ್ಟು ಬೇಗ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೌಮ್ಯ ಲಕ್ಷಣ ಹೊಂದಿದವರಿಂದಲೂ ಹಲವರಿಗೆ ಸೋಂಕು ಹರಡುವ ಸಾಧ್ಯತೆಯಿದೆ’ ಎಂದು ಎಚ್ಚರಿಸಿದರು.

‘ವಿಶ್ರಾಂತಿ ತೆಗೆದುಕೊಳ್ಳಲಿದೆ ವೈರಾಣು’

‘ಈಗ ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣ ಶೇ 5ಕ್ಕೆ ಏರಿಕೆಯಾಗುತ್ತಿದೆ. ವೈರಾಣು ವಿಶ್ರಾಂತಿ ತೆಗೆದುಕೊಂಡು ಹರಡಲು ಪ್ರಾರಂಭಿಸುತ್ತದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಖಗವಸು ಮತ್ತು ಲಸಿಕೆ ಸಹಕಾರಿ. ಮನೆ ಮತ್ತು ಕಚೇರಿಗಳಲ್ಲಿ ಗಾಳಿ ಸಂಚಾರ ಉತ್ತಮ ವ್ಯವಸ್ಥೆ ಇರಬೇಕು’ ಎಂದು ಡಾ. ವಿಶಾಲ್ ರಾವ್ ತಿಳಿಸಿದರು.

‘ಲಸಿಕೆಯ ಬಗ್ಗೆ ಬೂಸ್ಟರ್ ಡೋಸ್‌ ಸೇರಿದಂತೆ ವಿವಿಧ ಗೊಂದಲ ಸೃಷ್ಟಿಸಲಾಗುತ್ತಿದೆ. ಬೇರೆ ಬೇರೆ ರೂಪಾಂತರಗಳು ಕಾಣಿಸಿಕೊಳ್ಳುತ್ತಿದ್ದರೂ ಅವುಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸದ್ಯ ಬಳಸುತ್ತಿರುವ ಲಸಿಕೆಗಳು ಹೊಂದಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು