ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಖಾಸಗಿ ಆಸ್ಪತ್ರೆಗಳಿಂದ ಮನೆ ಆರೈಕೆ ಪ್ಯಾಕೇಜ್

Last Updated 19 ಏಪ್ರಿಲ್ 2021, 16:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳು ಮನೆ ಆರೈಕೆಗೆ ಒಳಗಾದವರಿಗೆ ವೈದ್ಯರಿಂದ ವಿಡಿಯೊ ಸಂವಾದ ಸೇರಿದಂತೆ ವಿವಿಧ ಸೇವೆ ಒಳಗೊಂಡ ಮನೆ ಆರೈಕೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿವೆ.

ಸೋಂಕಿನ ಲಕ್ಷಣಗಳು ಅಷ್ಟಾಗಿ ಗೋಚರಿಸದವರಿಗೆ ಮನೆ ಆರೈಕೆಗೆ ಒಳಗಾಗಲು ಸರ್ಕಾರವು ಅವಕಾಶ ನೀಡಿದೆ. ಇದರಿಂದಾಗಿ ಕೋವಿಡ್ ಪೀಡಿತರಲ್ಲಿ ಶೇ 90ರಷ್ಟು ಮಂದಿ ಮನೆ ಆರೈಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, 60 ವರ್ಷ ಮೇಲ್ಪಟ್ಟವರು ಸೇರಿದಂತೆ ಕೆಲವರಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಕೆಲ ದಿನಗಳಿಂದ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಏರಿಕೆ ಕಂಡಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಸದ್ಯ ನಗರದಲ್ಲಿ 1.03 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮನೆ ಆರೈಕೆಗೆ ಒಳಗಾದವರಿಗೆ ಕೊಲಂಬಿಯಾ ಏಷ್ಯಾ ಮಣಿಪಾಲ್, ಅಪೋಲೊ, ಆಸ್ಟರ್, ಸಾಕ್ರಾ, ನಾರಾಯಣ ಹೆಲ್ತ್, ವಿಕ್ರಮ್ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು 7ರಿಂದ 17 ದಿನಗಳ ‘ಮನೆ ಆರೈಕೆ’ ಪ್ಯಾಕೇಜ್ ಪರಿಚಯಿಸಿವೆ. ₹ 4 ಸಾವಿರದಿಂದ ₹ 20 ಸಾವಿರದವರೆಗೂ ದರ ನಿಗದಿ ಮಾಡಲಾಗಿದೆ. ಈ ಪ್ಯಾಕೇಜ್‌ ಅಡಿ ವೈದ್ಯರು ಮತ್ತು ಶುಶ್ರೂಷಕರಿಂದ ಆನ್‌ಲೈನ್ ಸಮಾಲೋಚನೆ ಒದಗಿಸಲಾಗುತ್ತಿದೆ. ಅದೇ ರೀತಿ, ಡಿಜಿಟಲ್ ಥರ್ಮಾಮೀಟರ್, ಪಲ್ಸ್ ಆಕ್ಸಿಮೀಟರ್, ಮುಖಗವಸು ಸೇರಿದಂತೆ ವಿವಿಧ ಸಾಧನಗಳನ್ನು ಒಳಗೊಂಡ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ದಿನದ 24 ಗಂಟೆಗಳೂ ತುರ್ತು ದೂರವಾಣಿ ಕರೆಗೆ ಅವಕಾಶ ನೀಡಲಾಗಿದೆ.

ಸೋಂಕಿತರಿಗೆ ಆಯ್ಕೆ: ಕೆಲ ಆಸ್ಪತ್ರೆಗಳು ನಾಲ್ಕರಿಂದ ಐದು ಮಾದರಿಯ ಪ್ಯಾಕೇಜ್‌ಗಳನ್ನು ನೀಡಿವೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯು 7 ದಿನಗಳಿಗೆ ₹ 4,999 ದರ ನಿಗದಿಪಡಿಸಿದೆ. ಇದರಲ್ಲಿ ಮನೆ ಆರೈಕೆ ಮಾರ್ಗದರ್ಶನ, ವೈದ್ಯರು ಮತ್ತು ಆಹಾರ ತಜ್ಞರಿಂದ ಸಮಾಲೋಚನೆ ಸೇರಿದಂತೆ ಆರು ಸೇವೆಗಳನ್ನು ನೀಡಲಾಗುತ್ತಿದೆ. ಔಷಧ ಹಾಗೂ ಕಿಟ್‌ಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಮಣಿಪಾಲ್ ಆಸ್ಪತ್ರೆಯು 9 ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ₹ 3,960ರಿಂದ ₹ 17 ಸಾವಿರದವರೆಗೂ ಶುಲ್ಕ ನಿಗದಿಪಡಿಸಲಾಗಿದೆ. ವೈದ್ಯಕೀ ಸೇವೆ ಪ್ಯಾಕೇಜ್ ಮತ್ತು ಕೋವಿಡ್‌ ಕಿಟ್ ಪ್ಯಾಕೇಜ್ ಎಂದು ವಿಂಗಡಿಸಲಾಗಿದೆ. ವೈದ್ಯಕೀಯ ಸೇವೆಗಳು 17 ದಿನಗಳು ಇರಲಿವೆ. ಸಾಕ್ರಾ ಆಸ್ಪತ್ರೆಯು 14 ದಿನಗಳಿಗೆ ₹ 10,500 ನಿಗದಿಪಡಿಸಿದೆ.

‘ಅಷ್ಟಾಗಿ ಸೋಂಕಿನ ಲಕ್ಷಣಗಳು ಗೋಚರಿಸಿದವರಿಗೆ ಮನೆ ಆರೈಕೆಗೆ ಶಿಫಾರಸು ಮಾಡಲಾಗುತ್ತಿದೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಲ್ಲಿ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆಯಾಗಲಿದೆ. ಮನೆ ಆರೈಕೆಗೆ ಒಳಗಾದವರಿಗೆ ವಿಡಿಯೊ ಸಮಾಲೋಚನೆ ಮೂಲಕ ಕೂಡ ಸೇವೆ ಒದಗಿಸಲಾಗುತ್ತಿದೆ’ ಎಂದು ಅಪೋಲೊ ಆಸ್ಪತ್ರೆ ತಿಳಿಸಿದೆ.

ಸರ್ಕಾರಿ ವ್ಯವಸ್ಥೆಯಲ್ಲಿ ನಡೆಯದ ಸಮಾಲೋಚನೆ

ಕೋವಿಡ್‌ ಪೀಡಿತ ವ್ಯಕ್ತಿಗಳು ಮನೆ ಆರೈಕೆಗೆ ಒಳಪಡಲು ಇಚ್ಛಿಸಿದಲ್ಲಿ ಬಿಬಿಎಂಪಿ ಅಧಿಕಾರಿಗಳು ಮನೆ ಪರಿಶೀಲಿಸಿ, ಅಗತ್ಯ ವ್ಯವಸ್ಥೆಯಿದ್ದಲ್ಲಿ ಅವಕಾಶ ನೀಡಬೇಕು. ಅದೇ ರೀತಿ, ವೈದ್ಯರು ಸೋಂಕಿತ ವ್ಯಕ್ತಿಯ ಮೌಲ್ಯಮಾಪನ ನಡೆಸಿ, ಮನೆ ಆರೈಕೆ ಬಗ್ಗೆ ನಿರ್ಧರಿಸಬೇಕು. ಬಳಿಕ ದೂರವಾಣಿ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಬೇಕು. ಆದರೆ, ಈಗ ಈ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕೋವಿಡ್ ಸೋಂಕಿತರು ಆರೋಪಿಸಿದ್ದಾರೆ.

‘ಮನೆ ಆರೈಕೆ ಒಳಗಾಗಿ 5 ದಿನಗಳಾದರೂ ಬಿಬಿಎಂಪಿಯಯಾವುದೇ ಅಧಿಕಾರಿ ಮನೆಗೆ ಭೇಟಿ ನೀಡಲಿಲ್ಲ. ಯಾವ ರೀತಿ ಅರೈಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಕೂಡ ವೈದ್ಯರು ನೀಡಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿಸಿ, ಸೇವೆ ಪಡೆದುಕೊಳ್ಳಬೇಕಿದೆ. ಆದರೆ, ಬಡ ಕುಟುಂಬದ ವ್ಯಕ್ತಿಗಳಿಗೆ ₹ 10 ಸಾವಿರದಿಂದ ₹ 15 ಸಾವಿರ ಪಾವತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಸರ್ಕಾರವು ಖಾಸಗಿ ಆಸ್ಪತ್ರೆಗಳು ನೀಡುವ ಮನೆ ಆರೈಕೆ ಸೇವೆಗೆ ಗರಿಷ್ಠ ದರ ನಿಗದಿ ಮಾಡಬೇಕು’ ಎಂದು 45 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT