ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಸವಾಲು ಇರುವುದೇ ಇನ್ನು ಮುಂದೆ: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌

ಕೋವಿಡ್‌ ನಿಯಂತ್ರಣ: ಆರ್‌ಡಬ್ಲ್ಯುಎ ಪ್ರತಿನಿಧಿಗಳ ಜೊತೆ ಸಂವಾದ
Last Updated 26 ಸೆಪ್ಟೆಂಬರ್ 2020, 12:03 IST
ಅಕ್ಷರ ಗಾತ್ರ

ಬೆಂಗಳೂರು: 'ಕೋವಿಡ್‌ ಜೊತೆಗಿನ ಸೆಣಸಾಟ ಇನ್ನೂ ಮುಗಿದಿಲ್ಲ. ಜನರ ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಿದ ಬಳಿಕ ನಾವೆಲ್ಲ ಇನ್ನಷ್ಟು ಎಚ್ಚರ ವಹಿಸಬೇಕಾಗಿದೆ. ಈ ರೋಗ ನಿಯಂತ್ರಣದ ವಿಚಾರದಲ್ಲಿ ನಿಜವಾದ ಸವಾಲು ಇರುವುದೇ ಇನ್ನು ಮುಂದೆ' ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಭಿಪ್ರಾಯಪಟ್ಟರು.

ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಜೊತೆ ಬಿಬಿಎಂಪಿ ಶನಿವಾರ ಏರ್ಪಡಿಸಿದ್ದ ಆನ್‌ಲೈನ್‌ ಸಂವಾದದಲ್ಲಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರು ಹಾಗೂ ಮಧುಮೇಹ, ಹೃದ್ರೋಗ ಮುಂತಾದ ಕಾಯಿಲೆಗಳನ್ನು ಹೊಂದಿರುವವರು, ಕೋವಿಡ್‌ ರೋಗ ಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಲ್ಲೇ ಪಲ್ಸ್‌ ಆಕ್ಸಿಮೀಟರ್‌ ಬಳಸಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ತಪಾಸಣೆ ಮಾಡಿಕೊಳ್ಳಬೇಕು. ಕೋವಿಡ್‌ ಪರೀಕ್ಷೆ ಮಾಡಿಸಲು, ಔಷಧ ಮತ್ತು ಆಕ್ಸಿಮೀಟರ್‌ಗಳನ್ನು ಒದಗಿಸಲು ಹಾಗೂ ಕೋವಿಡ್‌ ಲಕ್ಷಣಗಳಿದ್ದು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಬೇಕಾದವರಿಗೆ ಆರ್‌ಡಬ್ಲ್ಯುಎಗಳು ನೆರವಾಗಬೇಕು’ ಎಂದು ಆಯುಕ್ತರು ಕೋರಿದರು.

‘ಯಾರಿಗಾದರೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ ಕೋವಿಡ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ಈ ಕಾರ್ಯಕ್ಕೂ ಆರ್‌ಡಬ್ಲ್ಯುಎಗಳ ನೆರವಿನ ಅಗತ್ಯವಿದೆ’ ಎಂದರು.

ವೈದ್ಯಕೀಯ ಶಿಬಿರ: ‘ಪ್ರತಿ ಮತಗಟ್ಟೆ ಮಟ್ಟದಲ್ಲಿ, ವಾರ್ಡ್‌ ಮಟ್ಟದಲ್ಲಿ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಬೇಕಾಗುತ್ತದೆ. ಈ ಶಿಬಿರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯೋಜನ ಪಡೆಯುವಂತಾಗಬೇಕು. ಇದಕ್ಕೆ ಆರ್‌ಡಬ್ಲ್ಯುಎಗಳು ಪಾಳಿಕೆ ಜೊತೆ ಕೈಜೋಡಿಸಬೇಕು’ ಎಂದರು.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಕೋವಿಡ್‌ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಜೊತೆ ಸೇರಿ ಕೆಲಸ ಮಾಡಬಹುದು. ನಾಗರಿಕರಿಗೆ ಕೋವಿಡ್‌ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಆನ್‌ಲೈನ್‌ ಕ್ವಿಜ್‌ಗಳನ್ನು ಹಮ್ಮಿಕೊಳ್ಳಬಹುದು. ಜನರು ತಮ್ಮ ಅನುಭವ ಹಂಚಿಕೊಳ್ಳುವುದಕ್ಕೆ ವೇದಿಕೆ ಕಲ್ಪಿಸಬಹುದು. ಇದರಲ್ಲಿ ಮಕ್ಕಳು ಭಾಗವಹಿಸುವಂತೆ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

‘ಕೇವಲ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಸೀಮಿತವಾಗಿ ಸಾರ್ವಜನಿಕ ಆರೋಗ್ಯ ರಕ್ಷಣೆಯ ಮಾಹಿತಿಗಳನ್ನು ಹಂಚಿಕೊಂಡರೆ ಹಾಗೂ ಕೋವಿಡ್‌ ಪರೀಕ್ಷಾ ಶಿಬಿರಗಳನ್ನು ಏರ್ಪಡಿಸಿದರೆ ಸಾಲದು. ಆರ್‌ಡಬ್ಲ್ಯುಎ ಪ್ರತಿನಿಧಿಗಳು ಸಮೀಪದ ಕೊಳೆಗೇರಿಗಳು, ಕಚೇರಿಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳು ಬೇರೆಯವರಒಂದಿಗೆ ಬೆರೆಯುವ ಪ್ರದೇಶಗಳು ಮುಂತಾದ ಕಡೆಯೂ ಕೋವಿಡ್‌ ನಿಯಂತ್ರಣ ಕುರಿತು ಜಾಗೃತಿಯನ್ನುಂಟು ಮಾಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT