ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಕೊರತೆಯಿಲ್ಲ; ಆತಂಕ ಬೇಕಿಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

ನಗರದಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆ ಸುಧಾರಣೆ: ಗೌರವ್ ಗುಪ್ತ
Last Updated 16 ಏಪ್ರಿಲ್ 2021, 5:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆ ಇಲ್ಲ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ತುರ್ತು ಚಿಕಿತ್ಸಾ ವ್ಯವಸ್ಥೆಯೂ ಸಾಕಷ್ಟು ಸುಧಾರಿಸಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಖಾಸಗಿ ಆಸ್ಪತ್ರೆಗಳಿಂದ 6,000 ಹಾಸಿಗೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 2,500 ಹಾಸಿಗೆಗಳನ್ನು ಈಗಾಗಲೇ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತಿದೆ’ ಎಂದರು.

‘ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರು ಆಸ್ಪತ್ರೆಗಳಿಂದ ಬಿಡುಗಡೆ ಆದ ನಂತರ, ಕೋವಿಡ್‌ ರೋಗಿಗಳಿಗೆ ಹಾಸಿಗೆ ಮೀಸಲಿಡುವುದಾಗಿ ಹೇಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ 600 ಹಾಸಿಗೆ ಈಗಲೂ ಖಾಲಿ ಇವೆ’ ಎಂದರು.

ಸಾವಿರ ವೆಂಟಿಲೇಟರ್‌:ನಗರದಲ್ಲಿ ತುರ್ತು ಚಿಕಿತ್ಸಾಾ ಘಟಕದ ವ್ಯವಸ್ಥೆ, ಆಕ್ಸಿಜನ್ ಹಾಗೂ ವೆಂಟಿಲೇಟರ್ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆಗಳು ಈ ಹಿಂದೆಗಿಂತ ಸುಧಾರಿಸಿವೆ ಎಂದು ಅವರು ಹೇಳಿದರು.

‘ಆಕ್ಸಿಜನ್ ವ್ಯವಸ್ಥೆ ಅಡಿ ಚಿಕಿತ್ಸೆ ನೀಡುವ ಹಾಸಿಗೆಗಳು ಈ ಹಿಂದಿಗಿಂತ ಆರು ಪಟ್ಟು ಹೆಚ್ಚಾಗಿವೆ. ರಾಜ್ಯ ಮುಖ್ಯ ಕಾರ್ಯದರ್ಶಿಗಳೊಂದಿಗೂ ಚರ್ಚೆ ಮಾಡಲಾಗಿದ್ದು, ಒಂದು ಸಾವಿರ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಅತ್ಯಾಧುನಿಕ ಆ್ಯಂಬುಲೆನ್ಸ್‌:ನಗರದಲ್ಲಿ ವಿಧಾನಸಭಾ ಕ್ಷೇತ್ರವಾರು ಅತ್ಯಾಧುನಿಕ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲುಕೃತಕ ಆಮ್ಲಜನಕ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಇರಲಿದೆ ಎಂದರು.

‘ಕೊನೆಯ ಕ್ಷಣದವರೆಗೂ ಕಾಯಬೇಡಿ’
‘ತುರ್ತು ಚಿಕಿತ್ಸಾ ಘಟಕದಲ್ಲಿ ಹಾಸಿಗೆಗಳ ಕೊರತೆ ಉದ್ಭವಿಸುವ ಸಾಧ್ಯತೆ ಇದೆ. ಸೋಂಕಿತರು ಪರಿಸ್ಥಿತಿ ಗಂಭೀರವಾಗುವವರೆಗೂ ಕಾಯದೆ, ಲಕ್ಷಣಗಳು ಕಂಡ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಬೇಕು’ ಎಂದು ಗೌರವ್‌ ಗುಪ್ತ ಸಲಹೆ ನೀಡಿದರು.

‘ಸೋಂಕು ಪರೀಕ್ಷೆ ಮಾಡಿಸಿಕೊಂಡು ವರದಿ ಬರುವಷ್ಟರಲ್ಲೇ ವ್ಯಕ್ತಿಯ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿದೆ. ಜನ ದಯವಿಟ್ಟು ಪ್ರಾರಂಭಿಕ ಹಂತದಲ್ಲೇ ಸೋಂಕು ಪರೀಕ್ಷೆಗೆ ಒಳಗಾಗಬೇಕು' ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕು ದೃಢಪಡುವವರ ಪೈಕಿ ಶೇ.80ರಷ್ಟು ಪ್ರಕರಣಗಳಲ್ಲಿ ಸೋಂಕಿತರಿಗೆ ಹೆಚ್ಚಿನ ಆರೈಕೆ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಅಗತ್ಯ ಇರುವುದಿಲ್ಲ. ಆಸ್ಪತ್ರೆ ಚಿಕಿತ್ಸೆ ಅವಶ್ಯವಿರುವವರು ಮಾತ್ರ ಆಸ್ಪತ್ರೆಗೆ ದಾಖಲಾದರೆ ಉತ್ತಮ. ಎಲ್ಲರೂ ದಾಖಲಾಗಿ ಕೃತಕ ಅಭಾವ ಸೃಷ್ಟಿಸುವುದು ಬೇಡ. ನಿರ್ದಿಷ್ಟ ಆಸ್ಪತ್ರೆಯಲ್ಲಿಯೇ ದಾಖಲಾಗಬೇಕು ಎಂಬ ಒತ್ತಡ ಹೇರುವುದೂ ಬೇಡ’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT