ಭಾನುವಾರ, ಜೂನ್ 26, 2022
21 °C

ಲಾಕ್‌ಡೌನ್‌ ಒಮ್ಮೆಲೆ ತೆರವುಗೊಳಿಸುವುದು ಅಪಾಯ: ಡಾ.ಸುದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲಾಕ್‌ಡೌನ್‌ ಒಮ್ಮೆಲೆ ತೆರವುಗೊಳಿಸಿದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುವ ಅಪಾಯ ಇದೆ’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ಎಚ್ಚರಿಸಿದರು.

ರಾಜ್ಯದಲ್ಲಿ ಸೂಕ್ತ ಮತ್ತು ಸುರಕ್ಷಿತ ರೀತಿಯಲ್ಲಿ ಲಾಕ್‌ಡೌನ್‌ ನಿರ್ವಹಿಸಿ ತೆರವುಗೊಳಿಸುವ ವಿಧಾನ ಕುರಿತು ಸೊಸೈಟಲ್ ಆ್ಯಕ್ಷನ್ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್‌( ಎಸ್‌ಎಜಿಇ) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಏಪ್ರಿಲ್‌ ಕೊನೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಸೋಂಕಿತರಿಗೆ ಚಿಕಿತ್ಸೆ ಸಿಗದಷ್ಟು ಸಮಸ್ಯೆ ಆಯಿತು. ಆ ಸಂದರ್ಭದಲ್ಲಿ ಬ್ರಹ್ಮಾಸ್ತ್ರವಾಗಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಈಗ ಸೋಂಕು ನಿಯಂತ್ರಣಕ್ಕೆ ಬಂದಿದೆ’ ಎಂದರು.

‘ಲಾಕ್‌ಡೌನ್‌ ತೆರವು ವೇಳೆ ಎಲ್ಲಾ ಕ್ಷೇತ್ರಗಳ ಕಾರ್ಯಾಚರಣೆಗೆ ಒಮ್ಮೆಲೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಆಗಲಿದೆ. ಒಂದೇ ಕಡೆ ಹೆಚ್ಚು ಜನ ಸೇರುವ ಕಾರ್ಯಕ್ರಮ, ಜಾತ್ರೆ, ಮದುವೆ ಸಮಾರಂಭಗಳಿಗೆ ಹಾಗೂ ಒಳಾಂಗಣಗಳಲ್ಲಿ ಜನ ಸೇರುವುದಕ್ಕೆ ಅವಕಾಶ ಕಲ್ಪಿಸುವ ಚಿತ್ರಮಂದಿರ, ಬಾರ್‌, ಪಬ್‌ ಮೊದಲಾದವುಗಳಿಗೆ ಅವಕಾಶ ನೀಡಿದರೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, ಹಂತ–ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಲು ಯೋಚಿಸಲಾಗಿದೆ’ ಎಂದು ವಿವರಿಸಿದರು.

ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಗಿರಿಧರ್ ಬಾಬು ಮಾತನಾಡಿ, ‘ಲಾಕ್‌ಡೌನ್‌ನಿಂದ ಕೋವಿಡ್ ಹರಡುವಿಕೆ ತಡೆಯಲು ಸಾಧ್ಯವಿಲ್ಲ. ಆದರೆ, ಹರಡುವಿಕೆಯ ವೇಗ ಕಡಿಮೆ ಮಾಡಲು ಸಾಧ್ಯ. ಕೋವಿಡ್‌ನಿಂದ ಜನರನ್ನು ರಕ್ಷಿಸಲು ಉಳಿದ ದಾರಿ ಎಂದರೆ ಎಲ್ಲರಿಗೂ ಲಸಿಕೆ ನೀಡುವುದು’ ಎಂದು ಪ್ರತಿಪಾದಿಸಿದರು.

‘ಅಮೆರಿಕದಲ್ಲಿ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವ ಕಾರಣ ಆ ದೇಶ ಕೋವಿಡ್‌ನಿಂದ ಮುಕ್ತವಾಗಿದೆ. ನವೆಂಬರ್‌ನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ವರದಿಗಳಿವೆ. ಭಾರತದಲ್ಲೂ ಲಸಿಕೆ ಅಭಿಯಾನ ಪರಿಣಾಮಕಾರಿಯಾಗಿ ನಡೆಯಬೇಕಿದೆ’ ಎಂದರು.

ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ಆರ್ಥಿಕ ತಜ್ಞ ವಿನೋದ್ ವ್ಯಾಸುಲು, ಕಾರ್ಮಿಕ ಆರ್ಥಿಕ ತಜ್ಞ ಪ್ರೊ. ಅಮಿತ್ ಬಸೋಲೆ, ಜಿ.ಕೆ.ವೆಂಕಟೇಶ್, ಪಿ.ವಿ.ಕೃಷ್ಣನ್ ಭಟ್, ಬಿ.ಎಲ್.ಶಂಕರ್, ಪಿ.ವಿ.ವೇಣುಗೋಪಾಲ್, ಕುರುಬೂರು ಶಾಂತಕುಮಾರ್, ಪ್ರತಾಪ್ ಹೆಗ್ಡೆ ವೆಬಿನಾರ್‌ನಲ್ಲಿ ಭಾಗವಹಿಸಿದರು.

‘ಲಸಿಕೆ ಪಡೆದವರಿಗಷ್ಟೇ ಅವಕಾಶ– ತಪ್ಪು ನಿರ್ಧಾರ’

‘ಲಸಿಕೆ ಪಡೆಯದವರಿಗೆ ಶಾಲಾ, ಕಾಲೇಜು ಮತ್ತು ವಿಮಾನ ನಿಲ್ದಾಣಗಳಲ್ಲಿ ಅವಕಾಶ ನಿರಾಕರಿಸಿರುವುದು ಸರಿಯಾದ ಕ್ರಮ ಅಲ್ಲ’ ಎಂದು ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

‘ಈಗಾಗಲೇ ಸೋಂಕು ತಗುಲಿ ವಾಸಿಯಾದವರು 6 ತಿಂಗಳು ಲಸಿಕೆ ಪಡೆಯುವ ಅಗತ್ಯ ಇಲ್ಲ ಎಂದು ಸರ್ಕಾರವೇ ಹೇಳುತ್ತಿದೆ. ಗುಣಮುಖ ಆಗಿದ್ದರೂ ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಈಗಾಗಲೇ ಶೇ 70ರಷ್ಟು ಜನರಿಗೆ ಸೋಂಕು ಬಂದು ಹೋಗಿದೆ. ಅವರಿಗೆ ಸಹಜವಾಗಿಯೇ ರೋಗ ನಿರೋಧಕ ಹೆಚ್ಚಾಗಿರುತ್ತದೆ. ಯಾವುದೇ ಕರ್ತವ್ಯಕ್ಕೆ ಲಸಿಕೆ ಕಡ್ಡಾಯಗೊಳಿಸುವುದು ಸರಿಯಲ್ಲ’ ಎಂದರು.

‌‘ಲಾಕ್‌ಡೌನ್ ಅಗತ್ಯತೆಯನ್ನು ಮೊದಲಿನಿಂದಲೂ ಪ್ರಶ್ನಿಸಿದ್ದೇನೆ. ವಿಶ್ವ ಆರೋಗ್ಯ ಸಂಸ್ಥೆಯೂ ಲಾಕ್‌ಡೌನ್ ಮಾಡುವಂತೆ ಸಲಹೆ ನೀಡಿಲ್ಲ. ಕೋವಿಡ್ ತಡೆಯಲು ಲಾಕ್‌ಡೌನ್ ಪರಿಹಾರ ಅಲ್ಲ ಎಂಬುದನ್ನು ತಾಂತ್ರಿಕ ಸಲಹಾ ಸಮಿತಿಯ ತಜ್ಞರೇ ಹೇಳುತ್ತಿರುವುದು ಸಂತಸದ ಸಂಗತಿ’ ಎಂದರು.

‘ಲಾಕ್‌ಡೌನ್ ಹೆಸರಿನಲ್ಲಿ ವರ್ತಮಾನ ಮತ್ತು ಭವಿಷ್ಯವನ್ನು ಹಾಳು ಮಾಡಿದ್ದೇವೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೂಡಲೇ ಲಾಕ್‌ಡೌನ್ ತೆರವುಗೊಳಿಸಬೇಕು, ಶಾಲಾ– ಕಾಲೇಜುಗಳನ್ನು ತೆರೆಯಬೇಕು. ಸೋಂಕಿತರಾದವರಿಗೆ ಚಿಕಿತ್ಸೆ ಕೊಡುವ ವ್ಯವಸ್ಥೆ ಬಲಗೊಳಿಸಬೇಕು. ಸೋಂಕು ವ್ಯಾಪಕ ಇರುವ ಕ್ಲಸ್ಟರ್‌ಗಳನ್ನು ಗುರುತಿಸಿ ನಿಯಂತ್ರಿಸಬೇಕು’ ಎಂದು ಸಲಹೆ ನೀಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು