ಮಂಗಳವಾರ, ನವೆಂಬರ್ 19, 2019
23 °C

ವಿದ್ಯುತ್‌ ತಂತಿ ತಗುಲಿ ಬಾಲಕಿಸಾವು, ಬಾಲಕನ ಸ್ಥಿತಿ ಗಂಭೀರ

Published:
Updated:

ಬೆಂಗಳೂರು: ಮನೆಯ ಟೆರೇಸ್‌ನಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಗುಲಿ 15ರ ಹರೆಯದ ಬಾಲಕಿ ಮೃತಪಟ್ಟ ಮತ್ತು ಒಂಬತ್ತು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕೆ.ಆರ್‌.ಪುರದಲ್ಲಿ ನಡೆದಿದೆ.

ಕೆ.ಆರ್‌. ಪುರದ ತ್ರಿವೇಣಿ ನಗರದ ನಿವಾಸಿ, ದೇವಸಂದ್ರದ ಹೋಲಿ ಏಂಜೆಲ್ಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶೇಖ್‌ ಆರೀಫಾ ಮೃತ ಬಾಲಕಿ. ಆಕೆಯ ಪಕ್ಕದ ಮನೆಯ ನಿವಾಸಿ, ಅದೇ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುವ ಮೊಹ್ಮದ್‌ ಮೊಹ್ಸಿನ್‌ ಗಾಯಗೊಂಡಿದ್ದಾನೆ.

ಮೃತ ಬಾಲಕಿಯ ತಂದೆ ಶೇಖ್‌ ಜೈನುಲ್ಲಾಬುದ್ದೆನ್‌ (48) ಆಂಧ್ರಪ್ರದೇಶದ ನೆಲ್ಲೂರಿನವರಾಗಿದ್ದು, 20 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟಗಾರರಾಗಿರುವ ಅವರು ಕೆಲಸದ ನಿಮಿತ್ತ ಹೊರಗೆ ಹೋದಾಗ ಈ ಅವಘಡ ಸಂಭವಿಸಿದೆ.

ಶನಿವಾರ (ಸೆ. 14) ಸಂಜೆ 4.30 ಸುಮಾರಿಗೆ ಆರೀಫಾ ಮತ್ತು ಮೊಹ್ಸಿನ್ ಮನೆಯ ಟೆರೇಸ್‌ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಟೆರೇಸ್‌ನ ಮೂಲಕ ಹಾದು ಹೋಗಿದ್ದ ಹೈ ಟೆಸ್ಷನ್ ವಿದ್ಯುತ್‌ ತಂತಿ ತಗಲಿ ಮೊಹ್ಸಿನ್‌ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆತನ ರಕ್ಷಣೆಗೆ ತೆರಳಿದ ಆರೀಫಾಳಿಗೂ ವಿದ್ಯುತ್‌ ತಗಲಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಅಕ್ಕಪಕ್ಕದ ಮನೆಯವರ ನೆರವು ಪಡೆದು ಆರೀಫಾಳ ತಾಯಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ 3.30ಕ್ಕೆ ಆರೀಫಾ ಸಾವಿಗೀಡಾಗಿದ್ದಾಳೆ. ಮೊಹ್ಸಿನ್‌ ಸ್ಥಿತಿ ಇನ್ನೂ ಗಂಭೀರ ಇದೆ’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)