ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

Last Updated 26 ಸೆಪ್ಟೆಂಬರ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯರನ್ನು ಪರಿಚಯಿಸಿಕೊಂಡು ಅತ್ಯಾಚಾರ ಎಸಗಿ ಸೈನೈಡ್‌ ನೀಡಿ ಕೊಲೆ ಮಾಡುತ್ತಿದ್ದ ಸರಣಿ ಹಂತಕ ಮೋಹನ್‌ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ಗೆ, ನಗರದ ಉಪ್ಪಾರಪೇಟೆ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮೋಹನ್‌ ವಿರುದ್ಧ ಒಟ್ಟು 20 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿವೆ. ಅವುಗಳ ವಿಚಾರಣೆಯನ್ನು ಮಂಗಳೂರು ನ್ಯಾಯಾಲಯ ನಡೆಸುತ್ತಿದೆ. ಈಗಾಗಲೇ 16 ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆ ಆಗಿದೆ.

‘ಉಪ್ಪಾರಪೇಟೆ ವ್ಯಾಪ್ತಿಯಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ ಮೋಹನ್, ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆ ಸಂಬಂಧ 2010ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಸಿಐಡಿ ಡಿವೈಎಸ್ಪಿ ಕೆ. ಪುರುಷೋತ್ತಮ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ’ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಶಿಕ್ಷಕನಾಗಿದ್ದ ಹಂತಕ: ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಮೋಹನ್‍ಕುಮಾರ್ ಅಲಿಯಾಸ್ ಸೈನೈಡ್ ಮೋಹನ್ (56), ವೃತ್ತಿಯಲ್ಲಿ ಶಿಕ್ಷಕ ಆಗಿದ್ದ. ಸುಂದರ ರೈ, ಆನಂದ್, ಸುಧಾಕರ್ ಕುಲಾಲ್, ಸುಧಾಕರ ಆಚಾರ್ಯ, ಶಶಿಧರ ಪೂಜಾರಿ, ಜಿ. ಮನೋಹರ, ಶಶಿಧರ ಭಂಡಾರಿ, ಎಸ್. ಆನಂದ್, ಸುಧಾಕರ ರೈ, ಕೆ.ಸಂಜೀದ್, ರಾಜ್ ಪ್ರಕಾಶ್ ಆಚಾರ್ಯ, ಮನೋಜ್, ರಾಜೇಶ್, ಚಂದ್ರಶೇಖರ್... ಹೀಗೆ ನಾನಾ ಹೆಸರುಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ಮದುವೆ ಮಾಡಿಕೊಳ್ಳುವುದಾಗಿ ಹೇಳಿ ನಂಬಿಸುತ್ತಿದ್ದ ಆತ, ಯುವತಿಯರ ಮೇಲೆ ಅತ್ಯಾಚಾರ ಸಹ ಎಸಗುತ್ತಿದ್ದ. ಗರ್ಭನಿರೋಧಕ ಮಾತ್ರೆ ಎಂದು ಹೇಳಿ ಯುವತಿಯರಿಗೆ ಸೈನೈಡ್ ತಿನ್ನಿಸಿ ಕೊಲ್ಲುತ್ತಿದ್ದ. ಚಿನ್ನದ ಆಭರಣಗಳನ್ನು ದೋಚುತ್ತಿದ್ದ. ಆತನ ವಿರುದ್ಧ 2004ರಿಂದ 2009ರವರೆಗೆ 20 ಪ್ರಕರಣಗಳು ದಾಖಲಾಗಿದ್ದವು. ಆ ಪ್ರಕರಣಗಳ ತನಿಖೆಯನ್ನು 2010ರಲ್ಲಿ ಸಿಐಡಿಗೆ ವರ್ಗಾಯಿಸಲಾಗಿತ್ತು’ ಎಂದರು.

‘ಸದ್ಯ ಆರೋಪಿ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಇದ್ದಾನೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT