ಬೆಂಗಳೂರು: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
‘ನಂದಿನಿ ಬಡಾವಣೆಯ ನಂಜುಂಡೇಶ್ವರ ನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಲಗ್ಗೆರೆ ಬಳಿ ಅದೇ ವಾಹನದಲ್ಲಿ ಆರೋಪಿಗಳು ತಿರುಗುತ್ತಿದ್ದರು’.
‘ಪೊಲೀಸರು ಅನುಮಾನದಿಂದ ಪರಿಶೀಲಿಸಿದಾಗ ಆರೋಪಿಗಳ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅದು ಕದ್ದಿರುವ ವಾಹನ ಎಂದು ಆರೋಪಿಗಳು ಬಾಯ್ಬಿಟ್ಟರು’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು ಈಗಾಗಲೇ ಬೈಕ್ ಕಳವು ಹಾಗೂ ಮೊಬೈಲ್ ಅಂಗಡಿ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದು, ಬಿಡುಗಡೆಯಾದ ಬಳಿಕ ಮತ್ತೆ ಕಳ್ಳತನ ಮುಂದುವರಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಆರೋಪಿಗಳಿಂದ ₹ 6.88 ಲಕ್ಷ 10 ದ್ವಿಚಕ್ರ ವಾಹನಗಳು ಹಾಗೂ ಒಂದು ತ್ರಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ನಂದಿನಿ ಬಡಾವಣೆ, ರಾಜಗೋಪಾಲ ನಗರ, ಪೀಣ್ಯ, ಜಾಲಹಳ್ಳಿ, ಅನ್ನಪೂರ್ಣೇಶ್ವರಿ ನಗರ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ ಠಾಣೆಗಳಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.