ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಪ್ರಕರಣ: ಸುಳಿವು ನೀಡಿದ ಬೆರಳಚ್ಚು, ಹದಿನೈದು ವರ್ಷಗಳ ಬಳಿಕ ಆರೋಪಿಗಳ ಬಂಧನ

Last Updated 9 ಜುಲೈ 2021, 22:40 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ 2006ರಲ್ಲಿ ನಡೆದಿದ್ದ ಶಶಿಧರನ್ ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಜೈವೀರು, ಆತನ ಸ್ನೇಹಿತರಾದ ಅವಿನಾಶ್, ಮೋಸಿನ್ ಖಾನ್ ಬಂಧಿತರು. ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಪೊಲೀಸರು, ‘ಆರೋಪಿಗಳು ಪತ್ತೆಯಾಗಿಲ್ಲ’ ಎಂದು ನ್ಯಾಯಾಲಯಕ್ಕೆ ಸಿ–ರಿಪೋರ್ಟ್ ಸಲ್ಲಿಸಿದ್ದರು. ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರ ಬೆರಳಚ್ಚು ಪರಿಶೀಲಿಸಿದಾಗ, 15 ವರ್ಷಗಳ ಹಿಂದೆ ನಡೆದಿದ್ದ ಕೊಲೆ ರಹಸ್ಯ ಬಯಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಮೂವರು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ವಿಡಿಯೊ ಗೇಮ್ ಮಳಿಗೆ ಮಾಲೀಕ: ‘ಶಶಿಧರನ್ ಅವರು ಯಶವಂತಪುರ ಬಿ.ಕೆ.ನಗರದ 11ನೇ ಅಡ್ಡರಸ್ತೆಯಲ್ಲಿ ವಿಡಿಯೋ ಗೇಮ್ ಮಳಿಗೆ ನಡೆಸುತ್ತಿದ್ದರು. ಆರೋಪಿಗಳು ಸೇರಿದಂತೆ ಹಲವರು ಗೇಮ್ ಆಡಲು ಮಳಿಗೆಗೆ ಬರುತ್ತಿದ್ದರು. 2006ರ ನವೆಂಬರ್ 5ರಂದು ಶಶಿಧರನ್ ಅವರ ಕೈ- ಕಾಲು ಕಟ್ಟಿಹಾಕಿ ಕೊಲೆ ಮಾಡಲಾಗಿತ್ತು’ ಎಂದು ಅಧಿಕಾರಿ ಹೇಳಿದರು.

‘ಹೆಚ್ಚು ಗೇಮ್ ಆಡುತ್ತಿದ್ದ ಆರೋಪಿಗಳಿಗೆ ಹಣದ ಕೊರತೆ ಉಂಟಾಗಿತ್ತು. ಮಳಿಗೆಗೆ ಹೋದರೆ ಕೊಡಲು ಹಣವಿರಲಿಲ್ಲ. ಆರೋಪಿಯೊಬ್ಬನ ಮನೆಯಲ್ಲಿ ಕಂಪ್ಯೂಟರ್ ಇತ್ತು. ಆದರೆ, ಅದರಲ್ಲಿ ಗೇಮ್‌ಗಳು ಇರಲಿಲ್ಲ. ಮಳಿಗೆಗೆ ಹೋಗಿದ್ದ ಆರೋಪಿಗಳು, ಕಂಪ್ಯೂಟರ್‌ನಲ್ಲಿದ್ದ ಗೇಮ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮುಂದಾಗಿದ್ದರು. ಇದು ಗೊತ್ತಾಗಿ ಶಶಿಧರನ್ ಬೈದಿದ್ದರು. ಅದರಿಂದ ಸಿಟ್ಟಾದ ಆರೋಪಿಗಳು, ಮನೆಯಿಂದ ಹಗ್ಗ ತಂದು ಕೈ ಕಾಲುಗಳನ್ನು ಕಟ್ಟಿ ಶಶಿಧರನ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

ಬೆರಳಚ್ಚು ಸುಳಿವು: ‘ಸುಲಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು, ಹಲವು ಜಿಲ್ಲೆಗಳಲ್ಲಿ ಕೃತ್ಯ ಎಸಗಿದ್ದ ಮಾಹಿತಿ ಇತ್ತು. ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಬಗ್ಗೆಯೂ ತನಿಖೆ ಕೈಗೊಂಡು ಆರೋಪಿಗಳ ಬೆರಳಚ್ಚು ಪರಿಶೀಸಲಾಗುತ್ತಿತ್ತು. ಆರೋಪಿ ಜೈವೀರು ಬೆರಳಚ್ಚು, ಶಶಿಧರ್ ಕೊಲೆ ಪ್ರಕರಣಕ್ಕೆ ಹೋಲಿಕೆಯಾಯಿತು. ಅದೇ ಸುಳಿವಿನಿಂದಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT