ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 1,400 ಮಂದಿಗೆ ₹ 6 ಕೋಟಿ ವಂಚನೆ: ತಂದೆ– ಮಗ ಬಂಧನ

Published 21 ಅಕ್ಟೋಬರ್ 2023, 23:30 IST
Last Updated 21 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಪ್ಟೊ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ತಂದೆ – ಮಗ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸತೀಶ್, ಅವರ ಮಗ ಶ್ರೀಕಾಂತ್ ಹಾಗೂ ಸಹಚರ ದೀಪಕ್ ಬಂಧಿತರು. ಹೂಡಿಕೆ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ ಬಗ್ಗೆ ಸಂತ್ರಸ್ತರು ದೂರು ನೀಡಿದ್ದರು. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಜಿಜಿ ಆನ್‌ಲೈನ್ ಕಂಪನಿ ತೆರೆದಿದ್ದ ಆರೋಪಿಗಳು, ಇದುವರೆಗೂ 1,400 ಜನರಿಂದ ಸುಮಾರು ₹ 6 ಕೋಟಿ ಪಡೆದು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.

ಜಿಜಿಒ ಕರೆನ್ಸಿ: ‘ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು, ಜಿಜಿಒ ಹೆಸರಿನಲ್ಲಿ ಹೊಸ ಕರೆನ್ಸಿ ಪರಿಚಯಿಸುತ್ತಿರುವುದಾಗಿ ಹೇಳಿದ್ದರು. ಜಿಜಿಒ ಕರೆನ್ಸಿಯನ್ನು, ಕ್ರಿಪ್ಟೊ ಕರೆನ್ಸಿಗಳ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿರುವುದಾಗಿ ಹೇಳಿ ಜನರನ್ನು ನಂಬಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಅಂತರರಾಷ್ಟ್ರೀಯ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದಲ್ಲಿ ಜಿಜಿಒ ಕರೆನ್ಸಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಹಣ ಹೂಡಿಕೆ ಮಾಡಿ ಜಿಜಿಒ ಕರೆನ್ಸಿ ಖರೀದಿಸಿದರೆ, ಮುಂದಿನ ದಿನಗಳಲ್ಲಿ ದುಪ್ಪಟ್ಟು ಲಾಭ ಗಳಿಸಬಹುದು’ ಎಂಬುದಾಗಿಯೂ ಆರೋಪಿಗಳು ಹೇಳಿದ್ದರು. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲೂ ಜಾಹೀರಾತು ನೀಡಿದ್ದರು.’

‘ಜಾಹೀರಾತು ನಂಬಿ ಆರೋಪಿಗಳನ್ನು ಸಂಪರ್ಕಿಸಿದ್ದ ಕೆಲವರು, ಹಣ ಹೂಡಿಕೆ ಮಾಡಿ ಕರೆನ್ಸಿ ಖರೀದಿಸಿದ್ದರು. ಮತ್ತಷ್ಟು ಜನರನ್ನು ಕರೆತಂದರೆ ಶೇ 15ರಷ್ಟು ಕಮಿಷನ್ ನೀಡುವುದಾಗಿ ಆರೋಪಿಗಳು ಹೇಳಿದ್ದರು. ಇದೇ ಕಾರಣಕ್ಕೆ ಹೂಡಿಕೆದಾರರು, ಪರಿಚಯಸ್ಥರು ಹಾಗೂ ಸ್ನೇಹಿತರಿಂದಲೂ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಎಲ್ಲರಿಗೂ ಜಿಜಿಒ ಕರೆನ್ಸಿ ನೀಡಿದ್ದರು. ಆನ್‌ಲೈನ್‌ ಮೂಲಕ ಕರೆನ್ಸಿ ವ್ಯವಹಾರ ನಡೆಸುವ ತರಬೇತಿಯನ್ನೂ ನೀಡಿದ್ದರು.’

‘ಹಲವು ದಿನವಾದರೂ ಹೂಡಿಕೆದಾರರಿಗೆ ಯಾವುದೇ ಲಾಭ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನೊಂದ ಸಂತ್ರಸ್ತರು ಠಾಣೆಗೆ ದೂರು ನೀಡಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT