ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನಕ್ಕೆ ಹರಿಯುತ್ತಿದೆ ಕೊಳಚೆ ನೀರು

₹24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪ‍ಡಿಸಿದ್ದರೂ ‘ಸ್ಮಾರ್ಟ್‌’ ಆಗದ ಉದ್ಯಾನ
Published 25 ಮೇ 2023, 23:30 IST
Last Updated 25 ಮೇ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಜನರ ನೆಚ್ಚಿನ ತಾಣವಾಗಿರುವ ಕಬ್ಬನ್‌ ಉದ್ಯಾನಕ್ಕೆ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಉದ್ಯಾನದ ವಿವಿಧ ಭಾಗಳಲ್ಲಿರುವ ಒಳಚರಂಡಿ ಮೂಲಕ ಕೊಳಚೆ ನೀರು ಉದ್ಯಾನಕ್ಕೆ ಹರಿದು ಬರುತ್ತಿದೆ. ಇಲ್ಲಿ ನಿರ್ಮಿಸಿರುವ ಕಲ್ಲಿನ ಸೇತುವೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ, ಬಾಟಲ್‌ ಸೇರಿ ಕಟ್ಟಿಕೊಂಡು ಈ ಪ್ರದೇಶವೆಲ್ಲ ಗೆಬ್ಬೆದ್ದು ನಾರುತ್ತಿದೆ. ಇದೇ ನೀರು ಬಿದಿರು ಮೆಳೆಯ ಮಾರ್ಗವಾಗಿ ಕಮಲದ ಕೊಳ ಮತ್ತು ಬಾಲಭವನದ ಪುಟಾಣಿ ಕೆರೆ ತಲುಪುತ್ತಿದೆ. ಅಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ₹24 ಕೋಟಿ ವೆಚ್ಚದಲ್ಲಿ ಕಬ್ಬನ್‌ ಉದ್ಯಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಆದರೆ, ಈ ಕೊಳಚೆ ನೀರಿನ ಸಮಸ್ಯೆ ಮಾತ್ರ ಸರಿಪಡಿಸಿಲ್ಲ. ಬಿದಿರು ಮೆಳೆಯ ಸುತ್ತಮುತ್ತ ಕಟ್ಟಿಕೊಂಡಿರುವ ತ್ಯಾಜ್ಯ ನೀರಿನಿಂದ ಇಡೀ ಪರಿಸರ ದುರ್ನಾತದಿಂದ ಕೂಡಿದೆ’ ಎಂಬುದು ವಾಯುವಿಹಾರಿಗಳ ಆರೋಪ.

‘ಸುಮಾರು ₹1.5 ಕೋಟಿ ವೆಚ್ಚದಲ್ಲಿ ಕಮಲದ ಕೊಳದ ಅಭಿವೃದ್ಧಿಯನ್ನು ಮಾಡಲಾಗಿದೆ ಎಂಬುದು ಅಧಿಕಾರಿಗಳ ವಾದ. ಆದರೆ, ಕೊಳದ ಹೂಳನ್ನೇ ತೆಗೆದಿಲ್ಲ. ಇದರ ಅಭಿವೃದ್ಧಿಯೂ ಆಗಿಲ್ಲ. ಜತೆಗೆ ಕೊಳಚೆ ನೀರು ಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಕೊಳ ಹಿಂದೆ ಹೇಗೆ ಇತ್ತೂ ಈಗಲೂ ಹಾಗೆ ಇದೆ’ ಎಂದು ವಾಯುವಿಹಾರಿ ಹೇಮಾ ದೂರಿದರು.

'ಉದ್ಯಾನಕ್ಕೆ ಬರುವ ಕೊಳಚೆ ನೀರಿನ ಬಗ್ಗೆ ಹಲವು ಬಾರಿ ಅಧಿಕಾರಿಗಳು ಗಮನಕ್ಕೆ ತಂದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಳೆ ಬಂದರೆ ಉದ್ಯಾನದ ಸುತ್ತಮುತ್ತಲಿನ ನೀರು ಉದ್ಯಾನಕ್ಕೆ ಪ್ರವೇಶಿಸುತ್ತದೆ. ಇದರಿಂದ ಪಾದಚಾರಿ ಮಾರ್ಗಗಳೆಲ್ಲ ಕೆಸರುಮಯವಾಗುತ್ತವೆ. ಜತೆಗೆ ಕೊಳಚೆ ನೀರಿನ ದುರ್ನಾತದಿಂದ ಮೂಗು ಮುಚ್ಚಿಕೊಂಡು ವಾಕಿಂಗ್‌ ಮಾಡುವ ಪರಿಸ್ಥಿತಿ ಇದೆ’ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ ಆರೋಪಿಸಿದರು.

ಎಸ್‌. ಉಮೇಶ್
ಎಸ್‌. ಉಮೇಶ್
ಕಬ್ಬನ್‌ ಉದ್ಯಾನದ ಕಮಲ ಕೊಳದಲ್ಲಿ ಕಟ್ಟಿಕೊಂಡಿರುವ ಪಾಚಿ–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಕಬ್ಬನ್‌ ಉದ್ಯಾನದ ಕಮಲ ಕೊಳದಲ್ಲಿ ಕಟ್ಟಿಕೊಂಡಿರುವ ಪಾಚಿ–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಒಳಚರಂಡಿ ಮೂಲಕ ಕಬ್ಬನ್‌ ಉದ್ಯಾನಕ್ಕೆ ಹರಿದು ಬರುತ್ತಿರುವ ಕೊಳಚೆ ನೀರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಒಳಚರಂಡಿ ಮೂಲಕ ಕಬ್ಬನ್‌ ಉದ್ಯಾನಕ್ಕೆ ಹರಿದು ಬರುತ್ತಿರುವ ಕೊಳಚೆ ನೀರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಕಬ್ಬನ್‌ ಉದ್ಯಾನಕ್ಕೆ ಒಳಚರಂಡಿ ಮೂಲಕ ಮಳೆ ನೀರು ಮಾತ್ರ ಬರುತ್ತದೆ. ಮಳೆಗಾಲದಲ್ಲಿ ಯಾವುದೇ ರೀತಿಯ ವಾಸನೆಯು ಬರುವುದಿಲ್ಲ. ಯಾವುದೇ ರೀತಿಯ ಕೊಳಚೆ ನೀರು ಉದ್ಯಾನಕ್ಕೆ ಬರುವುದಿಲ್ಲ.

-ಎಚ್.ಟಿ.ಬಾಲಕೃಷ್ಣ ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ)

ಕಬ್ಬನ್‌ಪಾರ್ಕ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇಲ್ಲಿರುವ ವೈವಿದ್ಯಮಯ ಮರಗಳನ್ನು ನೋಡಲು ದೇಶ-ವಿದೇಶದಿಂದ ಜನ ಬರುತ್ತಾರೆ. ಇಂತಹ ಪ್ರತಿಷ್ಠಿತ ಉದ್ಯಾನದೊಳಗೆ ಒಳಚರಂಡಿ ನೀರು ಬರುವುದು ಸರಿಯಲ್ಲ.

-ಸೋನಿಕಾ ಗೌಡ ವಾಯುವಿಹಾರಿ

ಕಬ್ಬನ್‌ ಉದ್ಯಾನಕ್ಕೆ ವಾರಾಂತ್ಯದಲ್ಲಿ ನೂರಾರು ಜನ ಕುಟುಂಬ ಸಮೇತ ಆಗಮಿಸುತ್ತಾರೆ. ಆದರೆ ಉದ್ಯಾನದಲ್ಲಿ ಕೊಳಚೆ ನೀರು ಹರಿಯುವುದರಿಂದ ಉದ್ಯಾನದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ.

-ಎಸ್. ಉಮೇಶ್ ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅದ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT