ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರಾಜ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ| ಒಂದು ಕಿ.ಮೀ ಸಂಚರಿಸಲು 20 ನಿಮಿಷ !

ಕಬ್ಬನ್ ರಸ್ತೆಯಲ್ಲಿ ವಾಹನಗಳ ದಟ್ಟಣೆ; ಪರ್ಯಾಯ ಕ್ರಮಕ್ಕೆ ಪೊಲೀಸರ ಚಿಂತನೆ
Last Updated 19 ಜೂನ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಕಾಮಗಾರಿಗಾಗಿ ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಿ ಬುಧವಾರಕ್ಕೆ ನಾಲ್ಕು ದಿನಗಳಾಗಿದ್ದು, ಅಕ್ಕ–ಪಕ್ಕದ ರಸ್ತೆಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಕಂಡುಬರುತ್ತಿದೆ.

ಕಾಮಗಾರಿಗಾಗಿ ಸಂಚಾರ ಪೊಲೀಸರು ಈಗಾಗಲೇ ಮಾರ್ಗ ಬದಲಾವಣೆ ಮಾಡಿದ್ದಾರೆ. ಆ ಮಾರ್ಗಗಳಲ್ಲೇ ಅತೀ ಹೆಚ್ಚು ದಟ್ಟಣೆ ಉಂಟಾಗುತ್ತಿದೆ.

ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಹಾಗೂ ಕ್ವೀನ್ಸ್ ರಸ್ತೆ ಕಡೆಯಿಂದ ಮಣಿಪಾಲ್ ಸೆಂಟರ್‌ ಕಡೆಗೆ ಸಾಗುವ ವಾಹನಗಳು, ಕಬ್ಬನ್ ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಬುಧವಾರ ಸಂಜೆ ವೇಳೆ ಕಬ್ಬನ್ ರಸ್ತೆಯಲ್ಲಿ ವಾಹನಗಳಿಗೆ 1 ಕಿ.ಮೀ ಸಂಚರಿಸಲು 20 ನಿಮಿಷ ಬೇಕಾಯಿತು.

ಬಳ್ಳಾರಿ ರಸ್ತೆ, ವಸಂತನಗರ, ಶಿವಾಜಿನಗರ ಹಾಗೂ ಸುತ್ತಮುತ್ತ ಕಚೇರಿಗಳಲ್ಲಿ ಕೆಲಸ ಮಾಡುವ ಜನ, ನಿತ್ಯವೂ ಸಂಜೆ ಕಬ್ಬನ್ ರಸ್ತೆ ಮೂಲಕ ಕಾಮರಾಜ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಹೊಸೂರು ರಸ್ತೆಗೆ ಹೋಗುತ್ತಿದ್ದರು. ಆದರೆ, ಈಗ ಮಣಿ‍ಪಾಲ್ ಸೆಂಟರ್‌ವರೆಗೆ ಹೋಗಿ ಸುತ್ತಿ ಬಳಸಿ ಹೊಸೂರು ರಸ್ತೆಗೆ ಬರಬೇಕಾದ ಸ್ಥಿತಿ ಬಂದಿದೆ.

ಕಬ್ಬನ್ ರಸ್ತೆಯಿಂದ ಸಾಗಿ ಮಣಿಪಾಲ್ ಸೆಂಟರ್‌ನಲ್ಲಿ ಬಲ ತಿರುವು ಪಡೆಯುವ ವಾಹನಗಳು ಟ್ರಿನಿಟಿ ವೃತ್ತದತ್ತ ಹೋಗುತ್ತಿವೆ. ಅದರಿಂದಾಗಿ, ಹಳೇ ವಿಮಾನ ನಿಲ್ದಾನದಿಂದ ಎಂ.ಜಿ.ರಸ್ತೆಗೆ ಬರುವ ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಬೆಳಿಗ್ಗೆ 8ರಿಂದ 11 ಹಾಗೂ ಸಂಜೆ 4ರಿಂದ 10ರವರೆಗೆ ಕಬ್ಬನ್ ರಸ್ತೆ, ಟ್ರಿನಿಟಿ ವೃತ್ತದಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿ ಬಿಟ್ಟಿದೆ.

‘ಶಿವಾಜಿನಗರದ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಕೆಲಸ ಮುಗಿಸಿ ಕಬ್ಬನ್ ರಸ್ತೆ ಮೂಲಕ ಕೋರಮಂಗಲದಲ್ಲಿರುವ ಮನೆಗೆ ಹೋಗುತ್ತೇನೆ. ಮೊದಲು ಎರಡು ಅಥವಾ ಮೂರು ನಿಮಿಷಗಳಲ್ಲಿ ಕಬ್ಬನ್ ರಸ್ತೆ ದಾಟುತ್ತಿದ್ದೆ. ಆದರೆ, ಈಗ 20ರಿಂದ 30 ನಿಮಿಷ ಹಿಡಿಯುತ್ತಿದೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ರಾಜೀವ್‌ ಹೇಳಿದರು.

ಪಾದಚಾರಿಗಳಿಗೆ ಕಿರಿಕಿರಿ: ದಟ್ಟಣೆಯಿಂದ ಕೆಲ ಬೈಕ್‌ ಸವಾರರು, ಫುಟ್‌ಪಾತ್‌ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಅದರಿಂದಾಗಿ ಪಾದಚಾರಿಗಳ ಓಡಾಟಕ್ಕೆ ಕಿರಿಕಿರಿ ಉಂಟಾಗುತ್ತಿದೆ.

‘ಕಮರ್ಷಿಯಲ್ ಸ್ಟ್ರೀಟ್‌ನಿಂದ ಬರುವ ಜನ, ಕಬ್ಬನ್‌ ರಸ್ತೆಯಲ್ಲಿ ಸಾಗಿ ಹಲಸೂರು ಹಾಗೂ ಟ್ರಿನಿಟಿ ವೃತ್ತಕ್ಕೆ ನಡೆದುಕೊಂಡು ಹೋಗುತ್ತಾರೆ. ಅವರ ಹಿಂದಿನಿಂದ ಬೈಕ್‌ಗಳು ವೇಗವಾಗಿ ಬರುತ್ತಿವೆ’ ಎಂದು ಪಾದಚಾರಿ ಸುನಂದಮ್ಮ ಹೇಳಿದರು.

‘ಫುಟ್‌ಪಾತ್‌ ಮೇಲೆ ಸಾಗುವ ಬೈಕ್‌ ಸವಾರರನ್ನು ತಡೆದು ಕೇಳುವವರು ಯಾರೂ ಇಲ್ಲ. ಪೊಲೀಸರು ವೃತ್ತದಲ್ಲಿ ನಿಂತು ಸಿಗ್ನಲ್‌ಗಳ ನಿರ್ವಹಣೆ ಮಾಡುತ್ತಾರೆ. ಫುಟ್‌ಪಾತ್‌ನತ್ತ ತಿರುಗಿಯೂ ನೋಡುವುದಿಲ್ಲ’ ಎಂದು ದೂರಿದರು.

ಆಂಬುಲೆನ್ಸ್‌ ಬಂದರೆ ತೀರಾ ಕಷ್ಟ: ಕಬ್ಬನ್ ರಸ್ತೆಯ ಸದ್ಯದ ಸ್ಥಿತಿ ಗಮನಿಸಿದರೆ, ಆಂಬುಲೆನ್ಸ್‌ಗಳು ಸಂಚರಿಸುವುದು ತೀರಾ ಕಷ್ಟವಾಗಿದೆ.

‘ತುರ್ತು ಸಂದರ್ಭಗಳಲ್ಲಿ ಬೌರಿಂಗ್ ಆಸ್ಪತ್ರೆಯಿಂದ ರೋಗಿಗಳನ್ನು ಕರೆದೊಯ್ಯುವ ಹಾಗೂ ಕರೆದುಕೊಂಡು ಬರುವ ಆಂಬುಲೆನ್ಸ್‌ಗಳು ಇದೇ ರಸ್ತೆಯಲ್ಲೇ ಸಾಗುತ್ತವೆ. ಈಗ ಆಂಬುಲೆನ್ಸ್‌ಗಳು ಬಂದರೆ, ಸಾಲುಗಟ್ಟಿ ನಿಂತ ವಾಹನಗಳ ಮಧ್ಯೆಯೇ ಸಿಲುಕಬೇಕು. ಅದಕ್ಕೆ ದಾರಿ ಮಾಡಿಕೊಡಲು ಸಹ ಕಷ್ಟಪಡುತ್ತಿದ್ದೇವೆ’ ಎಂದು ಕರ್ತವ್ಯ ನಿರತ ಪೊಲೀಸರು ಹೇಳುತ್ತಾರೆ.

ಬಿಕೋ ಎನ್ನುತ್ತಿರುವ ಸಿಬಿಡಿ: ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧ ಮಾಡಿರುವುದರಿಂದ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ಬಿಕೋ ಎನ್ನುತ್ತಿದೆ.

ಮಾರ್ಗ ಬದಲಾವಣೆ ಮಾಡಿರುವುದರಿಂದ ಕಾವೇರಿ ಎಂಪೋರಿಯಂನಿಂದ ಅನಿಲ್‌ ಕುಂಬ್ಳೆ ವೃತ್ತದವರೆಗೆ ವಾಹನಗಳ ಓಡಾಟ ಕಡಿಮೆ ಆಗಿದೆ. ಅಷ್ಟಾದರೂ ಎಂ.ಜಿ.ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ಅವೈಜ್ಞಾನಿಕವಾಗಿ ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದಿದ್ದರಿಂದ ಸಾರ್ವಜನಿಕರು ಎಂ.ಜಿ.ರಸ್ತೆಗೆ ಬರುವುದು ಕಡಿಮೆಯಾಗಿದೆ.‌

ಶಿಸ್ತುಬದ್ಧ ಸಂಚಾರ ವ್ಯವಸ್ಥೆಗೆ ಕ್ರಮ
‘ನಗರದಲ್ಲಿ ಶಿಸ್ತುಬದ್ಧ ಸಂಚಾರ ವ್ಯವಸ್ಥೆ ಜಾರಿಗೆ ಬರಬೇಕು. ಹೀಗಾಗಿಯೇ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು,‘ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ ನಡುವೆ ಸುರಂಗ ಮಾರ್ಗ ಹಾಗೂ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ, ಸುತ್ತಮುತ್ತ ದಟ್ಟಣೆ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿದೆ. ನಿತ್ಯವೂ ಸಿಬ್ಬಂದಿ ಸ್ಥಳದಲ್ಲಿ ಇದ್ದುಕೊಂಡು ದಟ್ಟಣೆ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ದಟ್ಟಣೆ ಉಂಟಾಗಬಹುದೆಂಬ ಕಾರಣಕ್ಕೆ ಎಂ.ಜಿ.ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ಕೆಲ ದಿನಗಳವರೆಗೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದೇವೆ. ನಂತರ, ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡು ಮಾಡಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT