ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಮರಳಿಸಲು ಮುತ್ತೂಟ್ ಫೈನಾನ್ಸ್‌ಗೆ ಗ್ರಾಹಕರ ಆಗ್ರಹ

‌ಮುತ್ತೂಟ್ ಫೈನಾನ್ಸ್‌ನಿಂದ 70 ಕೆ.ಜಿ. ಚಿನ್ನಾಭರಣ ದರೋಡೆ ಪ್ರಕರಣ
Last Updated 27 ಡಿಸೆಂಬರ್ 2019, 5:33 IST
ಅಕ್ಷರ ಗಾತ್ರ

ಬೆಂಗಳೂರು: ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್‌ನಲ್ಲಿ ₹ 16 ಕೋಟಿ ಮೌಲ್ಯದ 70 ಕೆ.ಜಿ. ಚಿನ್ನಾಭರಣ ದರೋಡೆ ನಡೆದ ಬೆನ್ನಲ್ಲೇ, ಚಿನ್ನಾಭರಣಗಳನ್ನು ಅಡಮಾನ ಇಟ್ಟಿದ್ದ ನೂರಾರು ಜನರು ಗುರುವಾರ ಬೆಳಿಗ್ಗೆ ಫೈನಾನ್ಸ್ ಕಚೇರಿಗೆ ಬಂದು ತಮ್ಮ ಆಭರಣಗಳನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು.

ಈ ವೇಳೆ ಜನರ ಮನವೊಲಿಸಿದ ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು, ‘ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ. ಚಿನ್ನಾಭರಣ ಅಡಮಾನ ಇಟ್ಟಿರುವವರು ಆತಂಕಪಡುವ ಅಗತ್ಯವಿಲ್ಲ. ಘಟನೆ ಕುರಿತು ಸಂಸ್ಥೆಯ ಪ್ರಧಾನ ಕಚೇರಿಯ ಮುಖ್ಯಸ್ಥರಿಗೂ ಮಾಹಿತಿ ನೀಡಲಾಗಿದೆ. ಚಿನ್ನ ಹಿಂದಿರುಗಿಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು. ಇದೇ ವೇಳೆ ಕೆಲವು ಸಾರ್ವಜನಿಕರು, ಪೊಲೀಸರಿಗೂ ಮನವಿ ಮಾಡಿದರು.

‘ನೇಪಾಳ ಗ್ಯಾಂಗ್'ನ ಕೃತ್ಯ: ಮುತ್ತೂಟ್ ಫೈನಾನ್ಸ್ ಇರುವ ಕಟ್ಟಡಕ್ಕೆ ನಿಯೋಜನೆಗೊಂಡಿದ್ದ ನೇಪಾಳ ಮೂಲದ ಭದ್ರತಾ ಸಿಬ್ಬಂದಿ ಪ್ರೇಮ್ ಕುಮಾರ್ ಮತ್ತು ಇತರರು ತಮ್ಮ ಪರಿಚಿತವಾಗಿದ್ದ ‘ನೇಪಾಳ ಗ್ಯಾಂಗ್' ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

‘ಪತ್ತೆಗೆ ರಚಿಸಲಾಗಿರುವ ಐದು ಪ್ರತ್ಯೇಕ ತಂಡಗಳ ಪೈಕಿ ಮೂರು ತಂಡಗಳು ರಾಜಸ್ಥಾನ, ದೆಹಲಿ ಹಾಗೂ ಇತರೆ ಸ್ಥಳಗಳಿಗೆ ಪ್ರೇಮ್ ಕುಮಾರ್‌ನನ್ನು ಕರೆದೊಯ್ದಿವೆ. ಪ್ರಕರಣದ ಪ್ರಮುಖ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

‘ನೇಪಾಳ ಗ್ಯಾಂಗ್‌ ಅನ್ನು ಭದ್ರತಾ ಸಿಬ್ಬಂದಿಯೊಬ್ಬ ಒಂದೂವರೆ ತಿಂಗಳ ಹಿಂದೆಯೇ ಬೆಂಗಳೂರಿಗೆ ಕರೆಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದ. ಅಲ್ಲದೆ, ಒಳಗಡೆ ಪ್ರವೇಶಿಸಬೇಕಾದ ದಾರಿಯ ಬಗ್ಗೆಯೂ ಮಾಹಿತಿ ನೀಡಿದ್ದ. ಅದರಂತೆ ಆತನ ಸಹಚರರು ಗೋಡೆ ಕೊರೆದು ಒಳನುಗ್ಗಿ ದರೋಡೆ ಮಾಡಿ ಪರಾರಿಯಾಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ, ವಿಮಾನ ನಿಲ್ದಾಣ ಹಾಗೂ ನೆರೆ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಜತೆಗೂ ನಿರಂತರ ಸಂಪರ್ಕ ಸಾಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT