ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕಾರ್ಡ್, ರಾಂಚಿಯಲ್ಲಿ ಹಣ ಡ್ರಾ !

ಸೈಬರ್ ವಂಚಕರ ಕೃತ್ಯ * ಸ್ಕಿಮ್ಮರ್‌ ಬಳಸಿ ಮಾಹಿತಿ ಕದ್ದಿರುವ ಶಂಕೆ
Last Updated 11 ಜನವರಿ 2020, 21:38 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ಗಳು ವಿತರಿಸಿರುವ ಕ್ರೆಡಿಟ್ ಹಾಗೂ ಡೆಬಿಟ್‌ ಕಾರ್ಡ್‌ಗಳು ನಗರದ ಗ್ರಾಹಕರ ಬಳಿ ಇರುವಾಗಲೇ, ಜಾರ್ಖಂಡ್ ರಾಜ್ಯದ ರಾಂಚಿಯ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಿ ವಂಚಿಸಲಾಗಿದೆ.

ವಂಚನೆ ಸಂಬಂಧ ಇಬ್ಬರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಡ್‌ನ ಯಾವುದೇ ಮಾಹಿತಿ ನೀಡದಿದ್ದರೂ ಹಣ ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ಗ್ರಾಹಕರು ದೂರಿದ್ದಾರೆ.

‘ನಗರದಲ್ಲಿ ನೆಲೆಸಿರುವ ದೂರುದಾರರ ಬಳಿಯೇ ಕಾರ್ಡ್‌ಗಳಿವೆ. ಅದರ ಮಾಹಿತಿಯನ್ನೂ ಯಾರೊಂದಿಗೂ ಹಂಚಿಕೊಂಡಿಲ್ಲ. ಅಷ್ಟಾದರೂ ರಾಂಚಿಯಲ್ಲಿ ಹಣ ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೆಂಗಳೂರಿನ ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಅಳವಡಿಸಿ ಗ್ರಾಹಕರ ಕಾರ್ಡ್ ಮಾಹಿತಿ ಕದ್ದಿರುವ ಆರೋಪಿಗಳು ಅದನ್ನು ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿರುವ ಶಂಕೆ ಇದೆ. ತನಿಖೆಯಿಂದ ನಿಜಾಂಶ ತಿಳಿಯಬೇಕಿದೆ’ ಎಂದು ಅಧಿಕಾರಿ ತಿಳಿಸಿದರು.

ಬೈಯಪ್ಪನಹಳ್ಳಿ, ಹೆಣ್ಣೂರು ಠಾಣೆಯಲ್ಲಿ ಎಫ್‌ಐಆರ್: ‘ಎಸ್‌ಬಿಐ ಬ್ಯಾಂಕ್‌ನ ಸಿ.ವಿ.ರಾಮನ್ ನಗರ ಶಾಖೆಯಲ್ಲಿ ಖಾತೆ ಹೊಂದಿರುವಪಿ.ಕವಿತಾ ಎಂಬುವರುಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್‌ ಅವರ ಬಳಿಯೇ ಇದೆ. ಹೀಗಿರುವಾಗಲೇ, ರಾಂಚಿಯ ಎಟಿಎಂ ಘಟಕದಲ್ಲಿ ಜ. 8 ಹಾಗೂ 9ರಂದು ₹ 40 ಸಾವಿರ ಡ್ರಾ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಸಿದ್ದು ಡೊಳ್ಳಿ ಎಂಬುವರಿಗೂ ವಂಚನೆ ಆಗಿದ್ದು, ಆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೆಡಿಟ್‌ ಕಾರ್ಡ್‌ ಸಿದ್ದು ಅವರ ಬಳಿಯೇ ಇದ್ದು, ರಾಂಚಿಯಲ್ಲಿ ₹ 82,801 ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

₹ 50 ಸಾವಿರ ವಂಚನೆ: ‘ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ತನಯಾ ಶರ್ಮಾ ಎಂಬುವರಿಗೂ ವಂಚಿಸಲಾಗಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್ ತನಯಾ ಅವರ ಬಳಿಯೇ ಇದೆ. ಮಾಹಿತಿಯನ್ನು ಯಾರಿಗೂ ನೀಡಿಲ್ಲ. ಅಷ್ಟಾದರೂ ಅಪರಿಚಿತರು ₹ 50 ಸಾವಿರ ಡ್ರಾ ಮಾಡಿದ್ದಾರೆ’ ಎಂದು ತಿಳಿಸಿದರು.

ಲಿಂಕ್ ತೆರೆದು ₹63,900 ಕಳೆದುಕೊಂಡ
ಅಪರಿಚಿತನೊಬ್ಬ ಮೊಬೈಲ್‌ಗೆ ಕಳುಹಿಸಿದ್ದ ಲಿಂಕ್‌ ತೆರೆದು ಹಿಮಾನಿ ಶರ್ಮಾ ಎಂಬುವರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜ. 7ರಂದು ಮಧ್ಯಾಹ್ನ ಅಪರಿಚಿತನೊಬ್ಬ ಹಿಮಾನಿ ಅವರಿಗೆ ಕರೆ ಮಾಡಿದ್ದ. ನಂತರ, ಲಿಂಕ್ ಇದ್ದ ಸಂದೇಶವನ್ನು ಮೊಬೈಲ್‌ಗೆ ಕಳುಹಿಸಿದ್ದ. ಹಿಮಾನಿ ಅವರು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಬೇರೊಂದು ಜಾಲತಾಣ ತೆರೆದುಕೊಂಡಿದ್ದ. ಬಳಿಕವೇ ಹಿಮಾನಿ ಅವರ ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್‌ನಿಂದ ₹ 63,900 ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಈ ಸಂಬಂಧ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT