ಬೆಂಗಳೂರು: ‘ಬಾಣಸವಾಡಿ ಕೆರೆ ಜಾಗದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಇದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ನಗರಾಭವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳ ಸ್ಥಳ ಪರಿಶೀಲನೆಯನ್ನು ಬುಧವಾರ ನಡೆಸಿದರು.
‘ಕೆರೆ ಜಾಗದಲ್ಲಿ ಪಾರ್ಕ್ ನಿರ್ಮಾಣದ ವಿಚಾರವಾಗಿ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಹಿಂದೆ ಮಂಜೂರಾಗಿದ್ದ ಕಾಮಗಾರಿಗಳನ್ನು ಕಳೆದ ಸರ್ಕಾರ ರದ್ದು ಮಾಡಿತ್ತು. ಈಗ ಮತ್ತೆ ಸರ್ಕಾರಿ ಆಸ್ತಿ ಉಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ತೀರ್ಮಾನ ಮಾಡುವ ಮುನ್ನ ನಾನು ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರು ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇವೆ. ಬಿಡಿಎ, ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ದಾಖಲೆ ಪರಿಶೀಲನೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಮಳೆಯಲ್ಲಿಯೇ ಸೇವಾನಗರ ಮೇಲ್ಸೇತುವೆ, ಬಾಣಸವಾಡಿ ಕೆರೆ, ಕಾಚರಕನಹಳ್ಳಿಕೆರೆ ಹಾಗೂ ಹೆಣ್ಣೂರು ಬಂಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
47 ಎಕರೆ ವಿಸ್ತೀರ್ಣದಲ್ಲಿದ್ದ ಬಾಣಸವಾಡಿ ಕೆರೆ ಈಗ 17 ಎಕರೆಯಷ್ಟು ಮಾತ್ರ ಕೆರೆಯಾಗಿ ಉಳಿದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. ಕಾಚರಕನಹಳ್ಳಿ ಕೆರೆ ಸುತ್ತಲಿನ ಕೊಳೆಗೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಕೆರೆ ಜಾಗ ವಾಪಸ್ ಪಡೆಯಲು ಕೋರ್ಟ್‌ನಿಂದ ಆದೇಶ ಬಂದಿದೆ. ಕೆರೆ ಅಭಿವೃದ್ಧಿ ಮಾಡಿ ಪಕ್ಕದಲ್ಲೇ ವ್ಯೂ ಪಾರ್ಕ್ ಹಾಗೂ ಸ್ಟೇಡಿಯಂ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಹೇಳಿದರು.
ಹೆಣ್ಣೂರು ಬಂಡೆಯ 29 ಎಕರೆ ಜಾಗದಲ್ಲಿ ಸ್ವಲ್ಪ ಜಾಗ ಒತ್ತುವರಿಯಾಗಿದೆ. ಉಳಿದ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕಿದೆ ಎಂದು ಸಚಿವರ ಮುಂದೆ ಅಧಿಕಾರಿಗಳು ಪ್ರಸ್ತಾವ ಮುಂದಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.