ಗುರುವಾರ , ನವೆಂಬರ್ 14, 2019
22 °C
‘ಕಬ್ಬನ್‌ ಉದ್ಯಾನ ರಕ್ಷಿಸಿ’ ಅಭಿಯಾನ ನೆನಪಿಸಿದ ಪರಿಸರವಾದಿಗಳು

ಕಬ್ಬನ್‌ಪಾರ್ಕ್‌ನಲ್ಲಿ ಕಟ್ಟಡ ಬಂದರೆ ದಟ್ಟಣೆ ಹೆಚ್ಚು; ಪರಿಸರವಾದಿಗಳ ಎಚ್ಚರಿಕೆ

Published:
Updated:
Prajavani

ಬೆಂಗಳೂರು: ‘ಕಬ್ಬನ್‌ ಉದ್ಯಾನದಲ್ಲಿ ಉದ್ದೇಶಿತ ಏಳಂತಸ್ತಿನ ಕಟ್ಟಡ ತಲೆ ಎತ್ತಿದರೆ ಕಾಮಗಾರಿ ಹಾಗೂ ಕಟ್ಟಡ ತ್ಯಾಜ್ಯಗಳಿಂದ ಹಸಿರು ತಾಣ ಹಾಳಾಗಲಿದೆ. ಜನರ ಓಡಾಟ ಹಾಗೂ ವಾಹನಗಳ ಸಂಚಾರವೂ ದುಪ್ಪಟ್ಟಾಗಲಿದೆ’ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

20 ವರ್ಷಗಳ ಹಿಂದೆಯೇ ಕಬ್ಬನ್‌ ಉದ್ಯಾನಕ್ಕೆ ಸೇರಿದ ಜಾಗದಲ್ಲಿ ಶಾಸಕರ ಭವನ ನಿರ್ಮಾಣದ ಪ್ರಸ್ತಾಪ ಸಿದ್ಧವಾಗಿತ್ತು. ಜನಪ್ರತಿನಿಧಿಗಳು ಅನುಮತಿ ಪಡೆಯದೇ ಕಾಮಗಾರಿ ಆರಂಭಿಸುವ ವಿಶ್ವಾಸದಲ್ಲಿದ್ದರು. ಇದನ್ನು ವಿರೋಧಿಸಿ ‘ಪರಿಸರ ಬೆಂಬಲ ಗುಂಪು’ (ಇಎಸ್‌ಜಿ) ನೇತೃತ್ವದಲ್ಲಿ ‘ಕಬ್ಬನ್‌ ಉದ್ಯಾನ ರಕ್ಷಿಸಿ’ (ಸೇವ್ ಕಬ್ಬನ್ ಪಾರ್ಕ್‌) ಅಭಿಯಾನ ನಡೆಯಿತು.

ಕಬ್ಬನ್‌ ಉದ್ಯಾನದಲ್ಲಿ 44 ಎಕರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಡಿನೋಟಿಫಿಕೇಷನ್‌ ಮಾಡಿದ್ದಕ್ಕೆ ಜೆ.ಎಚ್‌.ಪಟೇಲ್ ನೇತೃತ್ವದ ಸರ್ಕಾರದ ವಿರುದ್ಧ ಪರಿಸರವಾದಿಗಳು, ಮಹಿಳಾ ಗುಂಪುಗಳು, ವನ್ಯಜೀವಿ ಕ್ಷೇಮಾಭಿವೃದ್ಧಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ನಂತರದ ದಿನಗಳಲ್ಲಿ ಉದ್ಯಾನದ ಚಿತ್ರಣ ಬದಲಾಯಿತು. ಉದ್ಯಾನದಲ್ಲಿ ಬಹುಸಂಖ್ಯೆಯಲ್ಲಿ ವಾಹನ ನಿಲುಗಡೆಗೆ ಅನುಮತಿ ಸಿಕ್ಕ ಕಾರಣ, ಅಲ್ಲಿನ ಶಾಂತತೆ ಹಾಗೂ ನಿಶ್ಯಬ್ಧಕ್ಕೆ ಧಕ್ಕೆಯಾಯಿತು. 

‘ಉದ್ದೇಶಿತ ಕಟ್ಟಡ ನಿರ್ಮಾಣದಿಂದ ಕಾನೂನು ಉಲ್ಲಂಘನೆಯಾಗದಿರಬಹುದು. ಆದರೆ, ಇಲ್ಲಿನ ಸಮಸ್ಯೆ ಕೇವಲ ತಾಂತ್ರಿಕತೆಗಳದ್ದಲ್ಲ. ಈ ಸ್ಥಳದ ಸೌಂದರ್ಯ ಮತ್ತು ಪರಿಸರ ಸ್ವರೂಪದ್ದಾಗಿದೆ. ಏಳಂತಸ್ತಿನ ಕಟ್ಟಡದ ರಚನೆಯಿಂದ ನೇರ ಅಥವಾ ಪರೋಕ್ಷವಾಗಿ ಉದ್ಯಾನದ ಅಸ್ತಿತ್ವಕ್ಕೆ ಧಕ್ಕೆ ಬರುವುದಂತೂ ಸತ್ಯ’ ಎಂದು ಪರಿಸರ ಹೋರಾಟ ಸಮಿತಿಯ ಲಿಯೊ ಸಲ್ಡಾನಾ ಅಭಿಪ್ರಾಯಪಟ್ಟರು.

ಪಾರಂಪರಿಕ ಸಮಿತಿಯ ಸಲಹೆ ಕೇಳಲು ನಿರ್ಧಾರ

ಕಬ್ಬನ್‌ ಉದ್ಯಾನದಲ್ಲಿ ಏಳು ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪಾರಂಪರಿಕ ಸಮಿತಿಯ ಸಲಹೆ ಕೇಳಲು ಬಿಬಿಎಂಪಿ ನಿರ್ಧರಿಸಿದೆ. 

‘ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳನ್ನು ಒಳಗೊಂಡಿರುವ ಕಬ್ಬನ್‌ ಉದ್ಯಾನ ಪ್ರದೇಶವು ‘ಪಾರಂಪರಿಕ ಸಂರಕ್ಷಣಾ ವಲಯ’ವಾಗಿತ್ತು ಎಂಬುದು 2015ರ ಪರಿಷ್ಕೃತ ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಉಲ್ಲೇಖವಾಗಿದೆ. ಈ ಕುರಿತು ನಕ್ಷೆಯನ್ನು ಪರಿಶೀಲಿಸಲಾಗಿದೆ. ಈ ಜಾಗದಲ್ಲಿ ಈಗಿರುವ ಕಟ್ಟಡವು ಪಾರಂಪರಿಕ ತಾಣದ ಲಕ್ಷಣ ಹೊಂದಿದೆ.  ಹೀಗಾಗಿ, ಈ ಕುರಿತು ಎಲ್ಲ ದಾಖಲೆಗಳನ್ನು ಮೈಸೂರಿಕ ಪಾರಂಪರಿಕ ಸಮಿತಿ ಮತ್ತು ಪುರಾತತ್ವ ಇಲಾಖೆಗೆ ಸಲ್ಲಿಸುತ್ತೇವೆ. ಅಲ್ಲದೆ, ಹಳೆಯ ಕಟ್ಟಡವು ಪಾರಂಪರಿಕ ಕಟ್ಟಡವೋ ಅಥವಾ ಅಲ್ಲವೋ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ತಿಳಿಸಿದರು.

‘ಒಂದು ವೇಳೆ ಇದು ಪಾರಂಪರಿಕ ಕಟ್ಟಡ ಅಲ್ಲ ಎಂದು ಸಮಿತಿಯು ಹೇಳಿದರೆ, ವಲಯ ನಿಯಮ ಅನುಸಾರ ಈ ಪ್ರದೇಶದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವ ಬಗ್ಗೆ ನಿರ್ಧರಿಸಲಾಗುತ್ತದೆ. ಸಮಿತಿಯು ಹಳೆಯ ಕಟ್ಟಡವು ಪಾರಂಪರಿಕ ಕಟ್ಟಡ ಎಂದು ಹೇಳಿದರೆ, ಹೊಸ ಕಟ್ಟಡ ನಿರ್ಮಾಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)