ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂದ್ರೆ ಕಾವ್ಯದಲ್ಲಿ ನೆಲ ಮುಟ್ಟುವ ಪ್ರೀತಿ’

ವಿಮರ್ಶಕ ಚಂದ್ರಶೇಖರ ನಂಗಲಿ ಮೆಚ್ಚುಗೆ *ಎಂ. ನರಸಿಂಹಗೆ ‘ದ.ರಾ. ಬೇಂದ್ರೆ ಸಾಹಿತ್ಯ ಸೇವಾ ಪ್ರಶಸ್ತಿ’
Last Updated 31 ಜನವರಿ 2023, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂದ್ರೆ ಅವರ ಕಾವ್ಯದಲ್ಲಿ ನೆಲ ಮುಟ್ಟುವ ಪ್ರೀತಿ ಎದ್ದು ಕಾಣುತ್ತದೆ. ಚೌಕಟ್ಟು ಅಳವಡಿಸಿಕೊಂಡಿರುವ ಸಾಹಿತ್ಯ ವಿಮರ್ಶಕರು, ಅವರ ಕಾವ್ಯವನ್ನು ಸೀಮಿತಗೊಳಿಸಿ ವಿಮರ್ಶಿಸಿದರು’ ಎಂದು ವಿಮರ್ಶಕ ಚಂದ್ರಶೇಖರ ನಂಗಲಿ ಹೇಳಿದರು.

ದ.ರಾ. ಬೇಂದ್ರೆ ಕಾವ್ಯಕೂಟ ನಗರದಲ್ಲಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ಉದಯಭಾನು ಕಲಾಸಂಘದ ಕಾರ್ಯದರ್ಶಿ ಎಂ. ನರಸಿಂಹ ಅವರಿಗೆ ‘ದ.ರಾ. ಬೇಂದ್ರೆ ಸಾಹಿತ್ಯ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. ವಿಮರ್ಶಕ ಜಿ. ಕೃಷ್ಣಪ್ಪ ಅವರ ‘ಬರೆಹದಲ್ಲಿ ಬೇಂದ್ರೆಯವರ ಬದುಕು’, ‘ಕರ್ಣಚೈತ್ರನ ಪರ್ಣಶಾಲೆ’ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

‘1919ರಲ್ಲಿ ಪ್ರಕಟಗೊಂಡ ಅವರ ‘ಚಂದ್ರ’ ಕವಿತೆಯು ವಿಮರ್ಶಕರ ಕಣ್ಣಿಗೆ ಅಜ್ಞಾತವಾಗಿ ಉಳಿಯಿತು. ಅವರ ಕಾವ್ಯದಲ್ಲಿ ಬೌದ್ಧ ತಾತ್ವಿಕತೆಯನ್ನು ಗುರುತಿಸಬಹುದಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯಕ್ಕೂ ಅವರ ಕಾವ್ಯದ ಮೂಲಕ ಉದಾಹರಣೆ ನೀಡಬಹುದು. ನಮ್ಮ ಸಾಹಿತ್ಯ ವಿಮರ್ಶೆ ಹಾಗೂ ಸಂಶೋಧನೆಗಳು ಚೌಕಟ್ಟನ್ನು ಅಳವಡಿಸಿಕೊಂಡಿವೆ. ನಿಸರ್ಗ ಮತ್ತು ಪ್ರಕೃತಿಯ ನಡುವೆ ಸೃಷ್ಟಿ ವಿರೋಧವನ್ನು ಬೇಂದ್ರೆ ಅವರ ಕಾವ್ಯದಲ್ಲಿ ಕಾಣುತ್ತೇವೆ’ ಎಂದು ಹೇಳಿದರು.

‘ಭಾಷೆಯಿಂದಲೇ ಗುಲಾಮಿತನ ಉಂಟಾಗುತ್ತದೆ. ಭಾಷೆಯನ್ನು ಕಲಿಯುವಾಗ ಜಾತಿ, ಧರ್ಮ, ಕಾಲವೆಂದು ಅಂಕುಶಮತಿ ಆಗುತ್ತೇವೆ. ಎಷ್ಟೋ ನಾಗರಿಕರು ಮನಸ್ಸಿಗೆ ಮೂಗುದಾರ ಹಾಕಿಕೊಂಡು ಇಕ್ಕಟ್ಟಿಗೆ ಒಳಗಾಗುತ್ತಾರೆ. ಜೀವನವು ಒಂದು ಪ್ಯಾಕೇಜ್ ರೀತಿಯಾಗಿದೆ. ಪ್ಯಾಕೇಜ್ ಎಂದರೆ ವಾಸ್ತವದಲ್ಲಿ ಸುಳ್ಳನ್ನು ಸೃಷ್ಟಿಸುವುದು. ಧರ್ಮದಲ್ಲಿ ಹಲವು ಪ್ಯಾಕೇಜ್‌ಗಳಿವೆ. ಬೇಂದ್ರೆ ಪ್ಯಾಕೇಜ್‌ಗಳ ಕವಿಯಲ್ಲ. ಬದಲಾಗಿ, ಪ್ರಕ್ರಿಯೆಗಳ ಕವಿಯಾಗಿದ್ದಾರೆ. ಮೊದಲ ಮೂರು ತಲೆಮಾರು ಅವರಿಗೆ ನ್ಯಾಯ ಒದಗಿಸಿಲ್ಲ’ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ. ನರಸಿಂಹ, ‘ಬೇಂದ್ರೆ ವಿಶ್ವದ ಕವಿ. ಅವರ ಕಾವ್ಯ ಕಬ್ಬಿಣದ ಕಡಲೆಯಾಗಿದ್ದು, ಕಾವ್ಯದಲ್ಲಿ ಬೆಂದವರು ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳುತ್ತಾರೆ’ ಎಂದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ‘ಕುಪ್ಪರೆಡ್ಡಿಯೂರು ಗ್ರಾಮದ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದೆ. ತಂದೆ–ತಾಯಿ ಬೆಳಗಿನ ಜಾವ ಮೂರು ಗಂಟೆಗೆ ನೇಗಿಲು ಮತ್ತು ಬಾನೆಯೊಂದಿಗೆ ಹೊಲಕ್ಕೆ ಹೋಗುತ್ತಿದ್ದರು. ತಾಯಿಯು ಬರಡು ಬಾವಿಗಿಳಿದು, ಸಂಗ್ರಹವಾಗಿರುವ ನೀರನ್ನು ಬಾನೆಗೆ ತುಂಬುತ್ತಿದ್ದರು’ ಎಂದು ಕಣ್ಣೀರು ಹಾಕಿದರು.

ದ.ರಾ.ಬೇಂದ್ರೆ ಸ್ಮೃತಿ ವಿಮರ್ಶಾ ಲೇಖನ ಸ್ಪರ್ಧೆಯ ವಿಜೇತರಾದ ಅನಿತಾ ಕೆ.ಎ., ಶೈಲಜಾ ಹೆಗ್ಡೆ ಹಾಗೂ ಕೃಪಾ ಎಚ್.ವಿ. ಅವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT