ಶನಿವಾರ, ಅಕ್ಟೋಬರ್ 31, 2020
26 °C
ಜಯನಗರದಲ್ಲಿ ನವೀಕೃತ ಲಿಡ್‌ಕರ್ ಮಾರಾಟ ಮಳಿಗೆ ಕಾರ್ಯಾರಂಭ

17 ಜಿಲ್ಲೆಗಳಲ್ಲಿ ಲಿಡ್‌ಕರ್ ಮಳಿಗೆ: ಗೋವಿಂದ ಎಂ. ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪರಿಣಿತ ವಿನ್ಯಾಸಗಾರರ ಸೇವೆ ಪಡೆದು, ಆಧುನಿಕ ಮಾರುಕಟ್ಟೆಯ ಟ್ರೆಂಡ್‌ಗೆ ಅನುಗುಣವಾಗಿ ಹೊಸ ವಿನ್ಯಾಸದಲ್ಲಿ ಲಿಡ್‌ಕರ್‌ ಬ್ರಾಂಡ್‌ನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು. 

ಡಾ. ಬಾಬು ಜಗನಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು (ಲಿಡ್‌ಕರ್) ಜಯನಗರದಲ್ಲಿ ಸ್ಥಾಪಿಸಿರುವ ನವೀಕೃತ ಮಾರಾಟ ಮಳಿಗೆ ಮತ್ತು ಇ–ಕಾಮರ್ಸ್ ವೆಬ್‌ಸೈಟ್‌ ಅನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು. 

‘ಲಿಡ್‌ಕರ್‌ ಬ್ರಾಂಡ್‌ ಅನ್ನು ‍ಪುನಶ್ಚೇತನಗೊಳಿಸಿ, ಸಂಸ್ಥೆಯನ್ನು ಲಾಭದಾಯಕವಾಗಿಸಲು  ತಜ್ಞರಿಂದ ವರದಿ ಪಡೆದುಕೊಳ್ಳಲಾಗಿದೆ. ಮಾರುಕಟ್ಟೆ ವಿಸ್ತರಿಸುವ ಜತೆಗೆ ವೈವಿಧ್ಯ ವಿನ್ಯಾಸದಲ್ಲಿ ಉತ್ಪನ್ನಗಳನ್ನು ಹೊರತರಲಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ನಮ್ಮ ಮಳಿಗೆಗಳು ಇವೆ. ಇನ್ನೂ 17 ಜಿಲ್ಲೆಗಳಲ್ಲಿ ಮಳಿಗೆ ಪ್ರಾರಂಭಿಸಲಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಳಿಗೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದರು.

‘ವಿವಿಧ ಬ್ರಾಂಡ್‌ ಉತ್ಪನ್ನಗಳು ದೊರೆಯುವ ಮಳಿಗೆಗಳಲ್ಲಿಯೂ ಲಿಡ್‌ಕರ್ ಸಂಸ್ಥೆಯ ಉತ್ಪನ್ನಗಳು ಸಿಗುವಂತಾಗಲು ಕ್ರಮಕೈಗೊಳ್ಳುತ್ತೇವೆ. ಈಗಾಗಲೇ ಕೊಲ್ಹಾಪುರಿ ಚಪ್ಪಲಿಗೆ ಜಿ.ಐ ಟ್ಯಾಗ್‌ ದೊರೆತಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್‌ ಜಿ.ಐ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭಿಸುತ್ತಿದೆ. ಅಲ್ಲಿ ಕೊಲ್ಹಾ‍ಪುರಿ ಚಪ್ಪಲಿಗಳ ಮಾರಾಟ ಕೌಂಟರ್ ತೆರೆಯಲಾಗುವುದು. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಸೇರಿದಂತೆ ವಿವಿಧೆಡೆ ವಿಶೇಷ ಕೌಂಟರ್‌ಗಳನ್ನು ಪ್ರಾರಂಭಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು. 

ಶೇ 20ರಷ್ಟು ರಿಯಾಯಿತಿ
ಜಯನಗರ ವಾಣಿಜ್ಯ ಸಂಕೀರ್ಣದಲ್ಲಿರುವ ನವೀಕೃತ ಲಿಡ್‌ಕರ್‌ ಮಳಿಗೆಯಲ್ಲಿ ಪ್ರಾರಂಭಿಕ ಕೊಡುಗೆಯಾಗಿ ಪ್ರತಿ ಉತ್ಪನ್ನದ ಮೇಲೆ ಶೇ 20ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಕೊಡುಗೆ ಸೆ.30ರವರೆಗೆ ಇರಲಿದೆ. ಶೂ, ಪಾದರಕ್ಷೆಗಳು, ಕೊಲ್ಹಾಪುರಿ ಚಪ್ಪಲಿಗಳು, ಮಹಿಳೆಯ ಹ್ಯಾಂಡ್‌ ಬ್ಯಾಗ್‌ಗಳು, ಪರ್ಸ್‌ಗಳು, ವಾಲೆಟ್‌ಗಳು, ಲ್ಯಾಪ್‌ಟಾಪ್ ಬ್ಯಾಗ್‌ಗಳು, ಬೆಲ್ಟ್‌ಗಳು, ಜಾಕೆಟ್‌ಗಳು ಸೇರಿದಂತೆ ಚರ್ಮದ ವಿವಿಧ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು