ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಕೈಸೇರದ ‘ಹಸಿರು ಪಟಾಕಿ’

ಅಂಗಡಿಗಳಲ್ಲಿ ಕಾಣದ ಖರೀದಿ ಸಂಭ್ರಮ: ವ್ಯಾಪಾರಿಗಳಲ್ಲಿ ನಿರಾಸೆ
Last Updated 26 ಅಕ್ಟೋಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಶುರುವಾಗಿದ್ದು, ನಗರದಲ್ಲಿ ಶನಿವಾರದಿಂದಲೇ ಪಟಾಕಿ ವ್ಯಾಪಾರ ಭರದಿಂದ ಸಾಗಿದೆ. ಆದರೆ, ಉದ್ಯಾನನಗರಕ್ಕೆ ‘ಹಸಿರು ಪಟಾಕಿ’ ಬಾರದ ಕಾರಣ ದೀಪಾವಳಿಗೆ ಪರಿಸರಸ್ನೇಹಿ ಪಟಾಕಿ ಹೊಡೆಯುವ ಸಂಭ್ರಮದಲ್ಲಿದ್ದವರಿಗೆ ನಿರಾಸೆ ಮೂಡಿಸಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ತಯಾರಿಸಿದ್ದ ‘ಹಸಿರು ಪಟಾಕಿ’ಯನ್ನು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಿಡುಗಡೆಗೊಳಿಸಿ ‘ಈ ದೀಪಾವಳಿಗೆ ಕಡಿಮೆ ಮಾಲಿನ್ಯದ ಪಟಾಕಿ ಸಿಡಿಸಿ’ ಎಂದು ಸಂದೇಶ ಸಾರಿದ್ದರು. ಆದರೆ, ಮಾರುಕಟ್ಟೆಯಲ್ಲಿ ಪರಿಚಯವಾಗದ ಕಾರಣ ನಗರದ ಜನರಿಗೆ ‘ಹಸಿರು ಪಟಾಕಿ’ ಇನ್ನೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ನಗರದ ಎಲ್ಲ ವಾರ್ಡ್‌ಗಳಲ್ಲಿ ಒಂದೆಡೆ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಮಲ್ಲೇಶ್ವರದ ಆಜಾದ್‌ ಮೈದಾನದಲ್ಲಿ 10ಕ್ಕೂ ಹೆಚ್ಚು ಬೃಹತ್ ಪಟಾಕಿ ಮಳಿಗೆಗಳು ತಲೆ ಎತ್ತಿವೆ. ಹಸಿರು ಪಟಾಕಿ ಎಂದರೆ ಇನ್ನೂ ವ್ಯಾಪಾರಿಗಳಲ್ಲಿ ಗೊಂದಲವಿದ್ದು, ಗ್ರಾಹಕರಿಗೆ ‘ಹಸಿರು ಪಟಾಕಿ’ ಖರೀದಿ ಮಾಡಿದ್ದಿರಾ? ಎಂದು ಕೇಳಿದಾಗ ಹಾಗಂದರೆ ಏನು? ಎಂದು ಸೋಜಿಗ ವ್ಯಕ್ತಪಡಿಸಿದರು.

‘ಹಸಿರು ಪಟಾಕಿಯನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದಾರೆ. ಆದರೆ, ಹಬ್ಬಕ್ಕೆ ಬೇಕಾದಷ್ಟು ಹಸಿರು ಪಟಾಕಿಯ ತಯಾರಾಗದ ಕಾರಣ ಈ ವರ್ಷ ಹಸಿರು ಪಟಾಕಿ ಗ್ರಾಹಕರ ಕೈಸೇರುವುದು ಅನುಮಾನ. ಮುಂದಿನ ದೀ‍ಪಾವಳಿಗೆ ಬಹುಶಃ ಹಸಿರು ಪಟಾಕಿ ಮಾರುಕಟ್ಟೆಗೆ ಬರಬಹುದು’ ಎನ್ನುತ್ತಾರೆ ಮಲ್ಲೇಶ್ವರದ ಪಟಾಕಿ ವ್ಯಾಪಾರಿ ವೇಣುಗೋಪಾಲ್‌.

‘ಪಟಾಕಿ ಹೊಡೆಯುವುದೇ ಒಂದು ಅಪರಾಧ ಎನ್ನುವ ಭಾವನೆ ಜನರಲ್ಲಿದೆ.ಪಟಾಕಿಯಿಂದ ವಾಯು ಮಾಲಿನ್ಯ,ಶಬ್ದ ಮಾಲಿನ್ಯ ಆಗುತ್ತದೆ ಎಂದು ಜನರಲ್ಲಿ ಹೆಚ್ಚುಜಾಗೃತಿ ಮೂಡಿಸಲಾಗಿದೆ. ಇದರಿಂದ ಪಟಾಕಿ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಹೆಚ್ಚು ಬಂಡವಾಳ ಹಾಕಿ ಪಟಾಕಿಗಳನ್ನು ತರಿಸಲಾಗಿದೆ. ಅಂಗಡಿ ಇಟ್ಟು ಎರಡು ದಿನ ಕಳೆದರೂ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಬರುತ್ತಿದ್ದಾರೆ’ ಎಂದುಬೇಸರ ವ್ಯಕ್ತಪಡಿಸಿದರು.

‘ಪಟಾಕಿ ಅಂಗಡಿ ತೆರೆಯಲು ಸರ್ಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿವೆ. ಅವುಗಳನ್ನು ಮೀರಿ ಪಟಾಕಿಯಿಂದ ಲಾಭ ಪಡೆಯುವುದು ದೊಡ್ಡ ಸವಾಲಾಗಿದೆ’ ಎಂದು ವಿವರಿಸಿದರು.

‘ಆಕರ್ಷಣೆ ಮರೆಯಾಗುತ್ತಿದೆ’
‘ದೀಪಾವಳಿ ಪ್ರಮುಖ ಆಕರ್ಷಣೆ ಪಟಾಕಿ. ವರ್ಷಕ್ಕೆ ಒಮ್ಮೆ ಆಚರಿಸುವ ಹಬ್ಬಕ್ಕೆ ಅಡೆತಡೆಗಳು ಹೆಚ್ಚಾಗಿವೆ. ಹಿಂದೂ ಸಂಪ್ರದಾಯದಂತೆ ದೀಪಾವಳಿ ವೇಳೆ ಪಟಾಕಿ ಹೊಡೆಯುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳೆಲ್ಲಾ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ವಾಯುಮಾಲಿನ್ಯ, ಶಬ್ದ ಮಾಲಿನ್ಯ ಎಂದು ಪಟಾಕಿ ಬಳಕೆಗೆ ನಿಷೇಧ ಹೇರುತ್ತಿರುವುದು ಸರಿಯಲ್ಲ. ಇದರಿಂದ ನಮ್ಮ ಸಂಪ್ರದಾಯಗಳು ಮರೆಯಾಗಲಿವೆ’ ಎಂದು ಪಟಾಕಿ ಅಂಗಡಿ ಮಾಲೀಕ ದಿಲೀಪ್‌ ಕಳವಳ ವ್ಯಕ್ತಪಡಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಗೂ ಗೊಂದಲ
‘ಹಸಿರು ಪಟಾಕಿ’ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೂ ನಿಖರ ಮಾಹಿತಿ ಇಲ್ಲಿವರೆಗೆ ಸಿಕ್ಕಿಲ್ಲ. ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ತಯಾರಾಗಬೇಕಿದೆ. ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೂ ಹಸಿರು ಪಟಾಕಿಯ ಮಾಹಿತಿ ಇಲ್ಲ. ಹಸಿರು ಪಟಾಕಿಗೆ ಇರುವ ಮಾನದಂಡಗಳು ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಂಡಳಿಗೂ ನಿರ್ದಿಷ್ಟ ಸೂಚನೆ ಇಲ್ಲದ ಕಾರಣ ಹಸಿರು ಪಟಾಲಿ ಗೊಂದಲವಾಗಿ ಉಳಿದಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ವರ್ಷಕ್ಕೆ ಒಂದು ದಿನ ಪಟಾಕಿ ಸಿಡಿಸುವುದರಿಂದ ಮಾಲಿನ್ಯವಾಗುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಸುರಕ್ಷಿತವಾಗಿ ಪಟಾಕಿ ಹೊಡೆಸಿದರೆ ಯಾವುದೇ ಅಪಾಯ ಆಗುವುದಿಲ್ಲ
–ದಿಲೀಪ್, ಪಟಾಕಿ ಅಂಗಡಿ ಮಾಲೀಕ

*
ದೀಪಾವಳಿಗೆ ಮಕ್ಕಳು ಕೇಳುವುದೇ ಪಟಾಕಿ. ಪಟಾಕಿ ಕೊಡಿಸದೇ ಇದ್ದರೆ ಬೇಸರ ಮಾಡಿಕೊಳ್ಳುತ್ತಾರೆ. ಅವರ ಒತ್ತಡಕ್ಕೆ ಮಣಿದು ಪಟಾಕಿ ಖರೀಸಿದ್ದೇನೆ.
–ಮಂಜುಳಾ, ರಾಜಾಜಿನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT