ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹ

ಜ.2ರಿಂದ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಗೆ ಚಾಲನೆ
Published : 28 ಡಿಸೆಂಬರ್ 2022, 16:03 IST
ಫಾಲೋ ಮಾಡಿ
Comments

ಬೆಂಗಳೂರು: ‘ಜನವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್‌ ತಿದ್ದುಪಡಿ ಮಸೂದೆ ರದ್ದುಪಡಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.2ರಿಂದ 11ರ ವರೆಗೆ ಕೂಡಲಸಂಗಮದಿಂದ ಬೆಂಗಳೂರಿನವರೆಗೂ ‘ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಎಲ್ಲ ಬೆಳೆಗಳಿಗೆ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಕನಿಷ್ಠ ಬೆಂಬಲ ಬೆಲೆ ದೊರೆಯುವಂತಾಗಬೇಕು. ರಾಜ್ಯ ಸರ್ಕಾರವು ಶ್ರೀಮಂತರಿಗೆ ಅನುಕೂಲವಾಗುವಂತೆ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಅದನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ನರೇಗಾ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಿ ₹600 ಕೂಲಿ ಪಾವತಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಿ, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನದ ಪಠ್ಯ ಬೋಧಿಸಬೇಕು. ಶಿಕ್ಷಣದ ಖಾಸಗೀಕರಣ ಮತ್ತು ಸಮಾಜದ ಕೋಮವಾದೀಕರಣವನ್ನು ನಿಲ್ಲಿಸಬೇಕು. ಸಾರ್ವಜನಿಕ ಉದ್ದಿಮೆಗಳು ಮತ್ತು ಸಾರ್ವಜನಿಕ ಭೂಮಿಯ ಖಾಸಗೀಕರಣ ಮಾರಾಟ ನಿಯಂತ್ರಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಬೇಕು ಎಂದು ರಾಜ್ಯದಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮಂಡ್ಯದಲ್ಲಿ 52 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಡಿ. 30ರಂದು ಮಂಡ್ಯಕ್ಕೆ ಆಗಮಿಸುತ್ತಿರುವ ಗೃಹ ಸಚಿವ ಅಮಿತ್‌ ಶಾ ಅವರಿಗೆ ಬಿಸಿ ಮುಟ್ಟಿಸಲು ರೈತರಿಂದ ರಸ್ತೆ ಬಂದ್‌ ಮಾಡಲಾಗುವುದು’ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ, ಕಾರ್ಯಧ್ಯಕ್ಷ ಜೆ.ಎಂ. ವೀರಸಂಗಯ್ಯ, ಕಾರ್ಯದರ್ಶಿ ಗೋಪಾಲ ಪಾಪೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT