ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನಿಗಮಗಳ ಕಾರ್ಮಿಕರ ವೇತನ ಹೆಚ್ಚಿಸಲು ಆಗ್ರಹ

Published 24 ಜನವರಿ 2024, 22:49 IST
Last Updated 24 ಜನವರಿ 2024, 22:49 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಶೇ 35ರಷ್ಟು ಮೂಲ ವೇತನವನ್ನು 2024ರ ಜ.1ರಿಂದ ಹೆಚ್ಚಿಸಬೇಕೆಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಎ.ವಿ. ಬೋರಶೆಟ್ಟಿ, ‘ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ 6ನೇ ವೇತನ ಆಯೋಗದ ಅನ್ವಯದಂತೆ ನಾಲ್ಕು ಸಾರಿಗೆ ನಿಗಮಗಳ ಕಾರ್ಮಿಕರಿಗೂ 2020ರ ಜ. 1ರಿಂದಲೇ ವೇತನ ಪಾವತಿಸಬೇಕು. ನಿಗಮಗಳ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ನಾಲ್ಕು ನಿಗಮಗಳಲ್ಲಿರುವ ಕಾರ್ಮಿಕ ಸಂಘಟನೆಗಳಿಗೆ  30 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಆದ್ದರಿಂದ ಕೂಡಲೇ ಕಾರ್ಮಿಕ ಸಂಘಗಳಿಗೆ ಚುನಾವಣೆ ನಡೆಸಬೇಕು. ಟ್ರೈನಿ ಪದ್ಧತಿಯನ್ನು ರದ್ದುಗೊಳಿಸಿ, ಸದ್ಯ ಕೆಲಸ ಮಾಡುತ್ತಿರುವ ಟ್ರೈನಿಗಳಿಗೆ ತಿಂಗಳಿಗೆ ಕನಿಷ್ಠ ₹30 ಸಾವಿರ ವೇತನ ನೀಡಬೇಕು. ಕಾರ್ಮಿಕರಿಗೆ ನೀಡುತ್ತಿರುವ ದಿನಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಸರ್ಕಾರಿ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯಗಳನ್ನು ಸಾರಿಗೆ ಕಾರ್ಮಿಕರಿಗೂ ಜಾರಿಗೊಳಿಸಬೇಕು. ಇಲ್ಲದಿದ್ದರೆ ಪ್ರತಿಯೊಬ್ಬ ಕಾರ್ಮಿಕನಿಗೂ ಮಾಸಿಕ ₹3 ಸಾವಿರ ವೈದ್ಯಕೀಯ ಭತ್ಯೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಂಡಳಿಯ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆ. 23ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT