ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಲ್ಲೇ ಅತಿ ಹೆಚ್ಚು ಡೆಂಗಿ ಪ್ರಕರಣ

ಬಿಬಿಎಂಪಿ ವ್ಯಾಪ್ತಿಯಲ್ಲಿ ಜ್ವರಪೀಡಿತರಾಗಿದ್ದವರ ಸಂಖ್ಯೆ 8,483
Last Updated 16 ನವೆಂಬರ್ 2019, 6:13 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಡೆಂಗಿ ಜ್ವರದ ಹಾವಳಿ ಮುಂದುವರೆದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಜನವರಿ 1ರಿಂದ ಈವರೆಗೆ 14,757 ಮಂದಿ ಸೋಂಕಿನಿಂದ ಬಳಲಿದ್ದಾರೆ. ಇದರಿಂದಾಗಿ ದಶಕದಲ್ಲೇ ಅತಿ ಹೆಚ್ಚು ಡೆಂಗಿ ಪ್ರಕರಣಗಳು ಈ ವರ್ಷ ವರದಿಯಾದಂತಾಗಿದೆ.

ಕಳೆದ ವರ್ಷದ ಇದೇ ಸಮಯದಲ್ಲಿ 3,357 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 698 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ವರ್ಷ ಡೆಂಗಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 8,483 ಮಂದಿ ಬಳಲಿದ್ದಾರೆ. 2014ರಿಂದ

ಡೆಂಗಿ ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು,2018ರಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಆದರೆ, ಈ ವರ್ಷ ಆರಂಭದಿಂದಲೇ ಜನರನ್ನು ಕಾಡುತ್ತಿದೆ.

ಡೆಂಗಿ ಜ್ವರದಿಂದ ಕಳೆದ ಒಂದು ತಿಂಗಳಲ್ಲಿ 5 ಮಂದಿ ಮೃತಪಟ್ಟಿದ್ದು, 2,476 ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ‘ಪ್ರತಿ ವರ್ಷ ಮಳೆ ಕಡಿಮೆಯಾಗುತ್ತಿದಂತೆ ಡೆಂಗಿ ಜ್ವರ ಕೂಡಾ ಕಡಿಮೆಯಾಗುತಿತ್ತು. ಆದರೆ, ಈ ವರ್ಷ ಆಗಾಗ ಮಳೆ ಕಾಣಿಸಿಕೊಂಡ ಪರಿಣಾಮ ಡೆಂಗಿ ಜ್ವರ ವರ್ಷ ಪೂರ್ತಿ ಕಾಡಿದೆ. ಇದೀಗ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಅಧಿಕ ಪ್ರಕರಣ ವರದಿಯಾದ ಜಿಲ್ಲೆಗಳು:ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೆಂಗಿ ಪ್ರಕರಣಗಳು ವರದಿಯಾಗಿವೆ.

ದಕ್ಷಿಣ ಕನ್ನಡ–1,425 (4 ಸಾವು), ಶಿವಮೊಗ್ಗ–545 (1 ಸಾವು), ಹಾವೇರಿ–358, ಚಿತ್ರದುರ್ಗ–278 (1 ಸಾವು), ಚಾಮರಾಜನಗರ–271, ದಾವಣಗೆರೆ–266, ಉಡುಪಿ–249, ರಾಯಚೂರು–235, ಕಲಬುರ್ಗಿ–229, ಕೋಲಾರ–212 (1 ಸಾವು), ಯಾದಗಿರಿ–196, ಚಿಕ್ಕಮಗಳೂರು–190, ಧಾರವಾಡ –188, ಹಾಸನ–186 ಹಾಗೂ
ಚಿಕ್ಕಬಳ್ಳಾಪುರ –183.

ಬೆಂಗಳೂರು ನಗರದಲ್ಲಿ ಎರಡು ಮಂದಿ, ರಾಮನಗರ, ವಿಜಯಪುರ, ಗದಗ, ಮಂಡ್ಯದಲ್ಲಿ ತಲಾ ಒಬ್ಬರು ಡೆಂಗಿ ಜ್ವರದಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT