ಬುಧವಾರ, ಜನವರಿ 29, 2020
29 °C
ನಿಷೇಧಾಜ್ಞೆ ಉಲ್ಲಂಘಿಸುವವರಿಗೆ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಖಡಕ್‌ ಎಚ್ಚರಿಕೆ

‘ಕಾನೂನಿನ ಬಿಸಿ ತಟ್ಟುವುದು ಖಚಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುವ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ, ನಿಷೇಧಾಜ್ಞೆ ಉಲ್ಲಂಘಿಸುವವರಿಗೆ ಕಾನೂನಿನ ಬಿಸಿ ತಟ್ಟುವುದನ್ನು ನೀವು ನೋಡಲಿದ್ದೀರಿ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಕಾಯ್ದೆ ಕುರಿತ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಿಷೇಧಾಜ್ಞೆ ಧಿಕ್ಕರಿಸಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಹಠಾತ್‌ ಪ್ರತಿಭಟನೆ ನಡೆಸಿದ್ದು ತಪ್ಪು, ಈಗಾಗಲೇ ಪ್ರಕರಣ ದಾಖಲಾಗಿದ್ದು, ಕಾನೂನು ಪ್ರಕಾರ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಶಾಸಕ ಯು.ಟಿ.ಖಾದರ್‌ ಅವರ ಉದ್ರೇಕಕಾರಿ ಹೇಳಿಕೆಯಿಂದಲೇ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದೆ. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂಬ ಸಂದೇಶ ಈಗಾಗಲೇ ರವಾನೆಯಾಗಿದೆ. ಅಲ್ಲಿ ಶಾಂತಿ ಸ್ಥಾಪಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಇದೆ. ಹೀಗಾಗಿಯೇ ಮುಖ್ಯಮಂತ್ರಿ, ಗೃಹ ಸಚಿವರು ಅಲ್ಲಿಗೆ ಹೋಗಿ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಪರಿಸ್ಥಿತಿ ತಿಳಿಯಾದ ಬಳಿಕ ವಿರೋಧ ಪಕ್ಷಗಳ ನಾಯಕರು ಅಲ್ಲಿಗೆ ಹೋಗುವುದಕ್ಕೆ ಯಾವ ಅಭ್ಯಂತರವೂ ಇಲ್ಲ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ನಾಯಕರಿಗೆ ಕೈಪಿಡಿ ತಲುಪಿಸಲಾಗುವುದು, ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಪ್ರದೇಶಗಳ
ಲ್ಲಿಯೂ ಕೈಪಿಡಿಯನ್ನು ಹಂಚುವ ಕೆಲಸ ನಡೆಯಲಿದೆ. ಜನರ ಮನಸ್ಸಿನಲ್ಲಿ ಮೂಡಿರುವ ಸಂಶಯ ಪರಿಹರಿಸುವ ನಿಟ್ಟಿನಲ್ಲಿ ಅಭಿಯಾನದ ರೀತಿಯಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.

ಯಾವ ತಪ್ಪೂ ಮಾಡಿಲ್ಲ: ‘ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಿಜೆಪಿ ಯಾವ ತಪ್ಪನ್ನೂ ಮಾಡಿಲ್ಲ, ದೇಶದ ಮುಂದಿದ್ದ ಹಲವು ಜಟಿಲ ಸಮಸ್ಯೆಗಳನ್ನು ಒಂದೊಂದಾಗಿ ನಿಭಾಯಿಸುತ್ತ ಬರುತ್ತಿರುವ ಕೇಂದ್ರ ಸರ್ಕಾರ ಇದೀಗ ಒಂದು ಐತಿಹಾಸಿಕ ಕ್ರಮ ಕೈಗೊಂಡಿದೆ. ಜನರಿಗೆ ಇದರ ಬಗ್ಗೆ ಇರುವ ತಿಳಿವಳಿಕೆ ಕೊರತೆಯನ್ನು ನಿವಾರಿಸುವ ಕೆಲಸವನ್ನು ಪಕ್ಷ ಮಾಡಲಿದೆ’ ಎಂದು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಖಾದರ್‌ ಮಾತ್ರ ಹೊಣೆ: ಶೆಟ್ಟರ್‌

‘ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದ್ದರೂ, ಮಂಗಳೂರು ಬಿಟ್ಟು ಬೇರೆಲ್ಲೂ ಹಿಂಸಾಚಾರ ನಡೆದಿಲ್ಲ. ಶಾಸಕ ಯು.ಟಿ.ಖಾದರ್ ಅವರ ಉದ್ರೇಕಕಾರಿ ಹೇಳಿಕೆಯಿಂದಲೇ ಪರಿಸ್ಥಿತಿ ಬಿಗಡಾಯಿಸಿದೆ, ಅಶಾಂತಿಗೆ ಅವರೊಬ್ಬರೇ ಕಾರಣ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದರು.

ಮಧ್ಯರಾತ್ರಿಯೇ ನಿಷೇಧಾಜ್ಞೆ ಅಂತ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಗರದಲ್ಲಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯು ಶನಿವಾರ ಮಧ್ಯರಾತ್ರಿ 12ಕ್ಕೆ ಅಂತ್ಯಗೊಂಡಿದೆ.

‘ಡಿ. 19ರ ಮಧ್ಯರಾತ್ರಿಯಿಂದ ಮೂರು ದಿನಗಳಿಂದ ನಗರದಲ್ಲಿದ್ದ ನಿಷೇಧಾಜ್ಞೆ ಕೊನೆಯಾಗಲಿದೆ. ಈ ಮೂರು ದಿನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ’ ಎಂದು ನಗರ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

’ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಯಾರಾದರೂ ಪ್ರತಿಭಟನೆ ನಡೆಸಲು ಮುಂದಾದರೆ ಅವರಿಗೆ ಅನುಮತಿ ಕೊಡಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಆಯಾ ಡಿಸಿಪಿಗಳೇ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಪರಿಸ್ಥಿತಿ ಕೈ ಮೀರುವ ಸಂದರ್ಭ ಬಂದರೆ ಪುನಃ ನಿಷೇಧಾಜ್ಞೆ ಜಾರಿ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.

ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಬೆಂಗಳೂರು: ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇದರ ನಡುವೆಯೇ ಸರ್ಕಾರಿ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

‘ಕ್ರೈಸ್ಟ್ ಕಾಲೇಜು, ಸೆಂಟ್ರಲ್ ಕಾಲೇಜು ಮತ್ತು ಮೌಂಟ್ ಕಾರ್ಮೆಲ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೂ ಎರಡು ಧರ್ಮಗಳ ಜನರ ನಡುವೆ ವೈಷಮ್ಯ ಸೃಷ್ಟಿಸುವ ಫಲಕಗಳನ್ನು ಪ್ರದರ್ಶಿಸಿದ್ದರು’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ತಿಳಿಸಿದರು.

‘ಪ್ರತಿಭಟನನಿರತ ವಿದ್ಯಾರ್ಥಿಗಳ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನೆಯ ವಿಡಿಯೊ ಹಾಗೂ ಫೋಟೊ ಆಧರಿಸಿ ವಿದ್ಯಾರ್ಥಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಹೊರ ರಾಜ್ಯದ ವಿದ್ಯಾರ್ಥಿಗಳು ಭಾಗಿ: ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿಭಟನೆಗೆ ಕುಮ್ಮಕ್ಕು ನೀಡಿದವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು