ಮಂಗಳವಾರ, ಸೆಪ್ಟೆಂಬರ್ 21, 2021
24 °C
ಪರಸಂಗಕ್ಕೆ ರೋಸಿದ್ದೇನೆ–ಸಾಫ್ಟ್‌ವೇರ್‌ ಪತಿಯ ಆರೋಪ

ಅರೋಪಿಗಳನ್ನು ಶಿಕ್ಷಿಸಿ, ನನ್ನ ರಕ್ಷಿಸಿ. ಪರಸಂಗಕ್ಕೆ ರೋಸಿದ್ದೇನೆ: ಟೆಕಿ ದೂರು

ಬಿ.ಎಸ್‌.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ಹೆಂಡತಿ ಮೂವರು ಪರಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಹತ್ತು ವರ್ಷಗಳಿಂದ ಮದ್ಯಪಾನ, ಧೂಮಪಾನ ಚಟಗಳಿಗೆ ಅಂಟಿಕೊಂಡಿದ್ದಾಳೆ. ಅವಳ ಮುಕ್ತ ಜೀವನ ಶೈಲಿಯನ್ನು ಪ್ರಶ್ನಿಸಿದ್ದಕ್ಕೆ, ಜೈಲುಕಂಬಿ ಎಣಿಸುವಂತೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಳೆ...’

ನಗರದ 6ನೇ ಅಡಿಷನಲ್‌ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ಕೋರ್ಟ್‌ನಲ್ಲಿ ನಗರದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ ದಾಖಲಿಸಿರುವ ಖಾಸಗಿ ದೂರಿನ ಸಾರಾಂಶವಿದು.

‘ಪತ್ನಿ ನನ್ನ ಬಾಳಿಗೆ ಕೊಳ್ಳಿ ಇಟ್ಟಿದ್ದಾಳೆ’ ಎಂದು ಆರೋಪಿಸಿರುವ ಪತಿ ಸಾಕ್ಷ್ಯ ರೂಪದಲ್ಲಿ, ಆಕೆ ವಾರಾಂತ್ಯಗಳಲ್ಲಿ ಪರಪುರುಷರೊಂದಿಗೆ ಸುತ್ತಾಡಿರುವ ಹೋಟೆಲ್‌ಗಳು, ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾದವರ ಜೊತೆ ಗೋವಾದ ಬೀಚ್‌ಗಳಲ್ಲಿ ತುಂಡುಡುಗೆಯಲ್ಲಿರುವ ಫೋಟೊಗಳು, ತೆಕ್ಕೆಗೆ ಅಂಟಿಕೊಂಡು ಶಾಪಿಂಗ್ ಮತ್ತು ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿ, ಫೇಸ್‌ಬುಕ್‌ ಫೋಟೊಗಳು, ವಾಟ್ಸ್‌ ಆ್ಯಪ್‌ ಸಂದೇಶಗಳ ಲೆಕ್ಕ, ಆಕೆಯ ಕಾರಿಗೆ ಜಿಪಿಎಸ್ ಅಳವಡಿಸಿ ಪಡೆದಿರುವ ಸುತ್ತಾಟದ ವಿವರಗಳನ್ನು ಕೋರ್ಟ್‌ಗೆ ನೀಡಿದ್ದಾನೆ!

ಪತ್ನಿ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಮೂವರ ವಿರುದ್ಧ ದೂರು ನೀಡಿರುವ ಗಂಡ, ‘ನನ್ನ ಮಾನಸಿಕ ಆಘಾತಕ್ಕೆ ಕಾರಣವಾಗಿರುವ ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾನೆ.

’ಹೆಂಡತಿಯ ವ್ಯಭಿಚಾರದ ವಿರುದ್ಧ ನಾನು 2015ರ ನವೆಂಬರ್‌ನಲ್ಲಿ ಎಚ್‌ಎಸ್‌ಆರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ, ಈ ದೂರು ಸಂಜ್ಞೆಯ ಅಪರಾಧ ವ್ಯಾಪ್ತಿಯಲ್ಲಿ ಇಲ್ಲ ಎಂದು ಪೊಲೀಸರು ತನಿಖೆ ನಡೆಸದೇ ಹೋದರು. ಅದಕ್ಕಾಗಿ ಈ ಖಾಸಗಿ ದೂರು ದಾಖಲಿಸಿದ್ದೇನೆ’ ಎಂದು ಆತ ಅರ್ಜಿಯಲ್ಲಿ ವಿವರಿಸಿದ್ದಾನೆ. ಈ ಪ್ರಕರಣದಲ್ಲಿ ದೂರುದಾರನ ಸಾಕ್ಷಿ ವಿಚಾರಣೆ ಭಾಗಶಃ ಮುಕ್ತಾಯವಾಗಿದೆ.

ವಿಚ್ಛೇದನ ಅರ್ಜಿ: ಏತನ್ಮಧ್ಯೆ ವಿವಾಹ ವಿಚ್ಛೇದನ ಕೋರಿರುವ ಪತಿಯು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾನೆ. ಇದರಲ್ಲಿ ಪತ್ನಿಗೆ ಮತ್ತು ಅವಳ ಜೊತೆ ಸಂಗ ಹೊಂದಿರುವಂತಹ ಪರಪುರುಷರಿಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿದೆ.

ನಾಲ್ವರಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವವರು ತಕರಾರು ಅರ್ಜಿ ಸಲ್ಲಿಸಿದ್ದರೆ, ಕೋಲ್ಕತ್ತಾ ಹಾಗೂ ಭುವನೇಶ್ವರದ (ಸದ್ಯ ದುಬೈ ವಾಸಿ) ಆರೋಪಿಗಳು ನೋಟಿಸ್‌ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಪ್ರಕರಣ ಏನು?: ದೂರುದಾರ ಪಟ್ನಾ ನಗರದವನು. ಗುವಾಹಟಿ ಐಐಟಿಯಿಂದ ಬಿ.ಟೆಕ್‌, ಕೊಯಿಕ್ಕೋಡ್‌ನ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದಾನೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾನೆ.

ಯುವತಿ ಜಾರ್ಖಂಡ್‌ನ ಜೆಮ್‌ಶೆಡ್‌ಪುರದವಳು. ಪುಣೆಯ ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿದ್ದಾಳೆ. ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರೂ ಸಂಪ್ರದಾಯಸ್ಥ ಕುಟುಂಬದವರು. 2011ರ ಡಿಸೆಂಬರ್ 5ರಂದು ಮದುವೆಯಾಗಿದ್ದಾರೆ. ಪತಿಗೆ ಈಗ 36. ಪತ್ನಿಗೆ 27 ವರ್ಷ. ಇನ್ನೂ ಮಕ್ಕಳಿಲ್ಲ. 

‘ಅಕ್ರಮ ಸಂಬಂಧ ಹೊಂದಿರುವವರಲ್ಲಿ ಒಬ್ಬನು ಅವಳಿಗಿಂತ ಏಳು ವರ್ಷ ಚಿಕ್ಕವನು. ಇನ್ನೊಬ್ಬ ಮೂರು ವರ್ಷ ಚಿಕ್ಕವನು. ನಗರದ ಪ್ರತಿಷ್ಠಿತ ಯೋಗ ಅಕಾಡೆಮಿಯೊಂದರ ಗುರು. ಮೂರನೆಯವನು ಅವಳ ಶಾಲಾ ಸಹಪಾಠಿ. ವಿದೇಶದಲ್ಲಿದ್ದಾನೆ. ಈ ಸಹಪಾಠಿಯ ಜೊತೆ ಗೋವಾಕ್ಕೆ ಹೋಗಿ ಸುತ್ತಾಡಿದ್ದಾಳೆ’ ಎಂಬುದು ಪತಿಯ ಆರೋಪ.

‘ಪತ್ನಿಯಿಂದ ನನ್ನ ಬದುಕು ದುಸ್ತರವಾಗಿದೆ. ಅವಳನ್ನು ಶಿಕ್ಷಿಸಿ, ನನಗೆ ನ್ಯಾಯ ಒದಗಿಸಿ’ ಎಂಬುದು ಪತಿಯ ಕೋರಿಕೆ.

’ಅವಳಿಂದ ನಿರ್ವಹಣಾ ವೆಚ್ಚ ಕೊಡಿಸಿ’
‘ನನ್ನ ಹೆಂಡತಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಈಕೆಯ ಉಪಟಳ ಹಾಗೂ ಜೀವನ ಶೈಲಿಯಿಂದ ಮಾನಸಿಕ ಕ್ಷೋಭೆಗೆ ಒಳಗಾಗಿ ಕೆಲಸ ಬಿಟ್ಟು ಆರ್ಥಿಕವಾಗಿ ದುರ್ಬಲಗೊಂಡಿದ್ದೇನೆ. ತಾತ್ಕಾಲಿಕವಾಗಿ ಪ್ರತಿ ತಿಂಗಳೂ ನನಗೆ  ₹ 35 ಸಾವಿರವನ್ನು ಆಕೆಯಿಂದ ಮಾಸಿಕ ಜೀವನಾಂಶವಾಗಿ ಕೊಡಿಸಬೇಕು’ ಎಂದು ಪತಿ ಕೋರಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು