ಶನಿವಾರ, ಫೆಬ್ರವರಿ 27, 2021
27 °C
ಸಚಿವ ಪರಮೇಶ್ವರ ನಗರ ಸಂಚಾರ– ಇಂದಿರಾನಗರ ಬಿಡಿಎ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳೀಯರ ವಿರೋಧ

‘ನಮಗೆ ಶಾಪಿಂಗ್‌ ಮಾಲ್‌ ಬೇಡ, ಉದ್ಯಾನ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಮಗೆ ಮತ್ತಷ್ಟು ಮಾಲ್‌ಗಳ ಅಗತ್ಯವಿಲ್ಲ. ಅವುಗಳ ಬದಲು ಉದ್ಯಾನ ನಿರ್ಮಿಸಿ’ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಸೋಮವಾರ ನಗರದ ಸಂಚಾರ ಕೈಗೊಂಡ ವೇಳೆ ಇಂದಿರಾನಗರ ನಿವಾಸಿಗಳು ಭಿನ್ನವಿಸಿಕೊಂಡಿದ್ದು ಹೀಗೆ.

ಇಂದಿರಾನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸದ್ಯದ ವಾಣಿಜ್ಯ ಸಂಕೀರ್ಣವನ್ನು ಕೆಡವಿ, ಹೊಸದನ್ನು ನಿರ್ಮಿಸಲು ಮುಂದಾಗಿದೆ. ಈ ಕಾಮಗಾರಿಗಾಗಿ 172 ಮರಗಳನ್ನು ಕಡಿಯಬೇಕಾಗುತ್ತದೆ.  ಹಾಗಾಗಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ‘ಐ ಚೇಂಜ್‌ ಇಂದಿರಾನಗರ’ ಸಂಘಟನೆಯವರು ಸಚಿವರಿಗೆ ಮನವಿ ಸಲ್ಲಿಸಿದರು.

‘ನಗರವನ್ನು ಇನ್ನಷ್ಟು ಅಂದವಾಗಿ ರೂಪಿಸುವುದೇ ನನ್ನ ಉದ್ದೇಶ. 10 ದಿನ ಬಿಟ್ಟು ಕಚೇರಿಗೆ ಬನ್ನಿ. ಈ ಯೋಜನೆ ಬಗ್ಗೆ ಸಮಗ್ರವಾಗಿ ಚರ್ಚಿಸೋಣ. ಬಿಡಿಎ ಇರಲಿ, ಜನರೇ ಇರಲಿ ಯಾರೂ ಈ ಯೋಜನೆ ವಿಚಾರವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಬಾರದು’ ಎಂದು ಸಚಿವರು ಹೇಳಿದರು.

ನಗರ ಸಂಚಾರ ಮುಗಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಇಂದಿರಾ ನಗರ ವಾಣಿಜ್ಯ ಸಂಕೀರ್ಣದ ಟೆಂಡರ್‌ ಪ್ರಕ್ರಿಯೆಗಳು ಮುಗಿದಿದ್ದು, ಇನ್ನೇನು ಕೆಲಸ ಆರಂಭವಾಗುವ ಸ್ಥಿತಿಯಲ್ಲಿದೆ. ಯಾರೋ ನಾಲ್ಕು ಜನ ವಿರೋಧ ಮಾಡುತ್ತಾರೆ ಎಂದಮಾತ್ರಕ್ಕೆ ಅದನ್ನು ಸರ್ಕಾರ ಒಪ್ಪುವುದಿಲ್ಲ. ಅಹವಾಲು ಸಲ್ಲಿಸುವುದಕ್ಕೆ ಅವರಿಗೂ ಸಮಯ ಕೊಡುತ್ತೇನೆ. ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

‘ಇಂದಿರಾನಗರ ವಾಣಿಜ್ಯೀಕರಣಗೊಂಡಿದೆ ಎಂದು ದೂರುವ ಸ್ಥಳೀಯರು, ಈಗಿರುವ ಶಾಪಿಂಗ್‌ ಕಾಂಪ್ಲೆಕ್ಸ್ ದುರಸ್ತಿ ಮಾಡುವ ಮೂಲಕ ಅದನ್ನು ಹಾಗೆಯೇ ಉಳಿಸಿಕೊಳ್ಳಿ ಎಂದೂ ಒತ್ತಾಯಿಸಿದ್ದಾರೆ. ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ಇದರಲ್ಲೇ ಅರ್ಥ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.   

‘ಬಿಡಿಎ ವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಪಾಲುದಾರರಾಗಿರುವ ಸಂಸ್ಥೆಗೆ ಗುತ್ತಿಗೆ ನೀಡಿರುವ ಬಗ್ಗೆ ವ್ಯಕ್ತವಾದ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಬಿಡಿಎ ಮೂರು ಸಲ ಟೆಂಡರ್‌ ಆಹ್ವಾನಿಸಿತ್ತು. ಅರ್ಹತೆ ಇರುವ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾನೂನಿಗೆ ವಿರುದ್ಧವಾಗಿ ಬಿಡಿಎ ನಡೆದುಕೊಂಡಿದ್ದರೆ ನಾಳೆಯೇ ಟೆಂಡರ್‌ ರದ್ದುಪಡಿಸಲು ಸಿದ್ಧ’ ಎಂದರು.

ರಾಜಕಾಲುವೆ ದುರಸ್ತಿಗೆ ಸೂಚನೆ: ದೊಮ್ಮಲೂರು ಮೇಲ್ಸೇತುವೆ ಬಳಿ ರಾಜಕಾಲುವೆ ಮಳೆ ಬಂದಾಗ ಉಕ್ಕಿ ಹರಿಯುತ್ತದೆ. ಇಲ್ಲಿ ಕಾಂಕ್ರೀಟ್‌ ಪೈಪುಗಳನ್ನು ಜೋಡಿಸಿ ಅದರ ಮೇಲೆ ಸೇತುವೆ ನಿರ್ಮಿಸಲಾಗಿದೆ.

‘ಪೈಪ್‌ಗಳ ನಡುವಿನ ಜಾಗವು ನೀರಿನ ಹರಿವಿಗೆ ಅಡ್ಡಿಯಾಗಿದೆ. ಪೈಪ್‌ಗಳ ಬದಲು ಚೌಕಾಕಾರದ ಕಾಂಕ್ರೀಟ್‌ ಕೊಳವೆಗಳನ್ನು ಅಳವಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬಹುದು’ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದರು.

‘ಇದಕ್ಕೆ ಬೇಕಾದ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ. 30 ದಿಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಚಿವರು ಗಡುವು ವಿಧಿಸಿದರು. 

3 ದಿನದೊಳಗೆ ವರದಿ ನೀಡಲು ಸೂಚನೆ: ‘ಮಿರಾಂದಾ ಶಾಲೆಯ ಬಳಿ ಜೀವನ್‌ ಭಿಮಾನಗರ ಮುಖ್ಯರಸ್ತೆ ಪಕ್ಕದ ರಾಜಕಾಲುವೆಯ ಹೂಳೆತ್ತದೆಯೇ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯೂ ವಿಳಂಬವಾಗಿದೆ’ ಎಂದು ಸ್ಥಳೀಯರು ದೂರಿದರು. ‘ಹೂಳೆತ್ತಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಮೂರು ದಿನಗಳ ಒಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು. ಹೂಳೆತ್ತಿದೆ ಬಳಿಕವೇ ತಡೆಗೋಡೆ ಬಲಪಡಿಸುವ ಕೆಲಸ ನಡೆಸಬೇಕು’ ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದರು.

ತಿಪ್ಪಸಂದ್ರದಲ್ಲಿ ಬಿಇಎಂಎಲ್‌ ರಸ್ತೆ ಪಕ್ಕದ ಮಳೆ ನೀರು ಹರಿಯುವ ಕಾಲವೆಯ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.

‘ಈ ಕಾಮಗಾರಿ ಆರಂಭವಾದ ಬಳಿಕ ಅಂಗಡಿಗೆ ಗಿರಾಕಿಗಳು ಬರುವುದಕ್ಕೆ ಸಮಸ್ಯೆ ಉಂಟಾಗುತ್ತಿದೆ. ತಿಂಗಳುಗಳಿಂದ ನಮಗೆ ವ್ಯಾಪಾರವೇ ಇಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ವರ್ತಕರು ಮನವಿ ಮಾಡಿದರು.

ಮರ್ಫಿಟೌನ್‌ನಲ್ಲಿ ಮಾಂಸ ಮಾರಾಟದ ಮಳಿಗೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ಸಚಿವರು ಸಲಹೆ ನೀಡಿದರು.

***

ಇಂದಿರಾನಗರದಲ್ಲಿ 100 ಅಡಿ ರಸ್ತೆ ನಿರ್ಮಾಣವಾಗುವಾಗಲೇ ಜನ ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಾಣಿಜ್ಯ ಚಟುವಟಿಕೆಯಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿರುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ
-ಜಿ.ಪರಮೇಶ್ವರ, ಬೆಂಗಳೂರು ಅಭಿವೃದ್ಧಿ ಸಚಿವ

ಇಂದಿರಾನಗರದ ಹೆಸರನ್ನು ಪಬ್‌ಗಳ ನಗರವೆಂದು ಬದಲಾಯಿಸಿ. ಇಲ್ಲಿ ವಾಣಿಜ್ಯ ಚಟುವಟಿಕೆ ಹಾವಳಿ ಮಿತಿಮೀರಿದೆ
ಸತೀಶ್‌ ರಾವ್‌, ಇಂದಿರಾನಗರ ನಿವಾಸಿ

 

ನಗರದೆಲ್ಲೆಡೆ ಮರಗಳನ್ನು ಕಡಿಯಲಾಗುತ್ತಿದೆ. ನಮಗೆ ಉಸಿರಾಡಲು ಒಂದಿಷ್ಟಾದರೂ ಆಮ್ಲಜನಕವನ್ನು ಉಳಿಸಿ
ಜ್ಯೋತಿ ಶೇಖರ್‌, ಇಂದಿರಾನಗರ ನಿವಾಸಿ

ಲಕ್ಷಗಟ್ಟಲೆ ಸಾಲ ಮಾಡಿ ಅಂಗಡಿ ನಡೆಸುತ್ತಿರುವವರು ನಾವು. ಹೈಕೋರ್ಟ್‌ ಆದೇಶದ ನೆಪಹೇಳಿ ಸಣ್ಣಪುಟ್ಟ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವ ಕೆಲಸ ನಡೆಯುತ್ತಿದೆ. ನಮ್ಮನ್ನೂ ಬದುಕಲು ಬಿಡಿ
ಕೇಶವ, ವರ್ತಕ

ಸಣ್ಣ ಪುಟ್ಟ ವ್ಯಾಪಾರಿಗಳ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ವಸತಿ ಪ್ರದೇಶದ ಸಣ್ಣಪುಟ್ಟ ರಸ್ತೆಗಳ ಪಕ್ಕದಲ್ಲಿ ದೊಡ್ಡ ಕಂಪನಿಗಳು ಭಾರಿ ಮಳಿಗೆಗಳನ್ನು ಆರಂಭಿಸುವುದಕ್ಕಷ್ಟೇ ನಮ್ಮ ವಿರೋಧ
ಪ್ರಿಯದರ್ಶಿನಿ, ಇಂದಿರಾನಗರ ನಿವಾಸಿ

****

‘ಕೆಂಪೇಗೌಡ ಪ್ರಶಸ್ತಿಗೆ ಮಿತಿ ನಿಗದಿ’

‘ಬಿಬಿಎಂಪಿ ವತಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಅತ್ಯಂತ ಗೌರವಯುತವಾದುದು. ಆದರೆ, ಪ್ರತಿವರ್ಷ ಪ್ರಶಸ್ತಿಗೆ ಅಷ್ಟೊಂದು ಮಂದಿಯನ್ನು ಏಕೆ ಆಯ್ಕೆ ಮಾಡುತ್ತಾರೋ ತಿಳಿಯದು. ಮುಂದಿನ ಸಲ ಈ ಪ್ರಶಸ್ತಿಯ ಸಂಖ್ಯೆಯನ್ನು ಸಿಮಿತಗೊಳಿಸುತ್ತೇವೆ. ಈ ವಿಚಾರದಲ್ಲಿ ಗೊಂದಲ ಉಂಟಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಪರಮೇಶ್ವರ ತಿಳಿಸಿದರು.

***

ಕೆಳಸೇತುವೆಗೆ ಶಂಕುಸ್ಥಾಪನೆ

ನಗರದ ಹಳೆಮದ್ರಾಸ್‌ ರಸ್ತೆ ಮತ್ತು ಸುರಂಜನ್‌ದಾಸ್‌ ರಸ್ತೆ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.

‘₹ 45 ಕೋಟಿ ವೆಚ್ಚದ ಇ ಯೋಜನೆ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. 15 ತಿಂಗಳ ಒಳಗೆ ಕೆಲಸ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ಕೆಳಸೇತುವೆಯಲ್ಲಿ ನಾಲ್ಕು ಪಥಗಳ ರಸ್ತೆ ಇರಲಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.