ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುತ್ತುರಾಜ್ ಮುಖವಾಡ ತೆಗೆಯದ ರಾಜಕುಮಾರ್’

ರಾಜಕುಮಾರ್ ಜನ್ಮದಿನಾಚರಣೆ ಸಮಾರಂಭದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅಭಿಮತ
Published 24 ಏಪ್ರಿಲ್ 2024, 22:54 IST
Last Updated 24 ಏಪ್ರಿಲ್ 2024, 22:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕುಮಾರ್ ಎಷ್ಟೇ ದೊಡ್ಡ ನಟರಾದರೂ ಮುತ್ತುರಾಜ್ ಮುಖವಾಡ ತೆಗೆಯಲಿಲ್ಲ. ಕೊನೆಯವರೆಗೂ ತಲೆ ಬಗ್ಗಿಸಿಯೇ ಸಾಗಿದರು’ ಎಂದು ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದರು.  

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜಕುಮಾರ್ ಅವರ 96ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ, ತಂದೆಯ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. 

‘ನನಗೆ ಸರಳತೆಯ ಮುತ್ತುರಾಜ್ ಇಷ್ಟವಾಗುತ್ತಾರೆ. ನಾನು ಚಿತ್ರರಂಗಕ್ಕೆ ಪ್ರವೇಶಿಸಿದಾಗ ಸೋಲು–ಗೆಲುವನ್ನು ಯಾವರೀತಿ ಸ್ವೀಕರಿಸಬೇಕೆಂದು ಮಾರ್ಗದರ್ಶನ ಮಾಡಿದರು. ಬದುಕುವ ದಾರಿಯನ್ನು ತೋರಿಸಿಕೊಟ್ಟರು. ಅಪ್ಪಾಜಿ ಬಗ್ಗೆ ಪುಸ್ತಕ ಬರೆಯಲು ತಮ್ಮ ಓಡಾಡುತ್ತಿದ್ದಾಗ, ನನ್ನ ಬಗ್ಗೆ ಏಕೆ ಪುಸ್ತಕ ಬರೆಯುತ್ತಾನೆ ಎಂದು ಪ್ರಶ್ನಿಸಿದ್ದರು. ಹೊರಗಡೆ ಅಭಿಮಾನಿಗಳು ರಾಜಕುಮಾರ್ ಅವರನ್ನು ಬೆರಗು ಕಣ್ಣಿನಿಂದ ನೋಡಿದರೂ, ಅವರು ಮುತ್ತುರಾಜ್ ಆಗಿಯೇ ಸರಳ ಜೀವನ ನಡೆಸಿದರು’ ಎಂದು ಹೇಳಿದರು. 

ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ‘ರಾಜಕುಮಾರ್ ಅವರು ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಜೀವತುಂಬಿದರು. 20ನೇ ಶತಮಾನವು ಕನ್ನಡ ನಾಡಿಗೆ ನೀಡಿದ ದೊಡ್ಡ ಕೊಡುಗೆ ರಾಜಕುಮಾರ್. ಕುವೆಂಪು ಅವರು ಈಗ ಇದ್ದಿದ್ದರೆ ನಾಡಗೀತೆಯಲ್ಲಿ ರಾಜಕುಮಾರ್ ಅವರ ಹೆಸರನ್ನು ಸೇರಿಸುತ್ತಿದ್ದರು. ರಾಜಕುಮಾರ್ ಅವರ ಶತಮಾನೋತ್ಸವಕ್ಕೆ ಅವರ ಬಗ್ಗೆ ಚಲನಚಿತ್ರವನ್ನು ಹೊರತರಬೇಕು. ಅದನ್ನು ರಾಜಕುಮಾರ್ ಅವರ ಕುಟುಂಬ ಅಥವಾ ಬೇರೆ ಯಾರಾದರೂ ಸಾಕಾರ ಮಾಡಲಿ’ ಎಂದು ಆಶಯ ವ್ಯಕ್ತಪಡಿಸಿದರು. 

ಕಲಾವಿದ ಶ್ರೀನಿವಾಸಮೂರ್ತಿ, ‘ರಾಜಕುಮಾರ್ ಅವರು ಸಹ ಕಲಾವಿದರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ನಟರು ಬಂದು ಹೋಗಿದ್ದಾರೆ. ಆದರೆ, ರಾಜಕುಮಾರ್ ಅವರಿಗೆ ಸಿಕ್ಕಿರುವ ಪಾತ್ರಗಳು ಬೇರೆ ಯಾರಿಗೂ ಸಿಕ್ಕಿಲ್ಲ. ಅವರು ಎಲ್ಲ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಬಾಯಲ್ಲಿ ಎಂದಿಗೂ ಅಪಶಬ್ದ, ಅಪನುಡಿ ಬಂದಿಲ್ಲ’ ಎಂದು ಹೇಳಿದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ, ‘ರಾಜಕುಮಾರ್ ಅವರು ‘ಅಭಿಮಾನಿ ದೇವರುಗಳು’ ಎಂದು ಹೇಳುವ ಮೂಲಕ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದರು. ತಮ್ಮ ಚಲನಚಿತ್ರಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದರು. ನೆಲ–ಜಲದ ಅಸ್ಮಿತೆಗೆ ಧಕ್ಕೆ ಬಂದಾಗ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು’ ಎಂದರು. 

ಇದಕ್ಕೂ ಮೊದಲು ರಾಜಕುಮಾರ್ ಅವರ ಚಲನಚಿತ್ರಗಳ ಜನಪ್ರಿಯ ಗೀತೆಗಳ ಗಾಯನ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT