ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯ್ ಸ್ಮರಣೆ, ವೈದ್ಯರ ಸೇವೆಗೆ ಗೌರವ ಸಲ್ಲಿಕೆ

ನಗರದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ದಿನ ಆಚರಣೆ
Published 1 ಜುಲೈ 2023, 19:28 IST
Last Updated 1 ಜುಲೈ 2023, 19:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಳಿ ಕೋಟನ್ನು ಧರಿಸಿ ಆಸ್ಪತ್ರೆಗಳಿಗೆ ಬಂದಿದ್ದ ವೈದ್ಯರ ಮೊಗದಲ್ಲಿ ಮಂದಹಾಸವಿತ್ತು. ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳು ಶುಭ ಹಾರೈಸುತ್ತಿರುವಂತೆ ವೃತ್ತಿಯ ಬಗ್ಗೆ ತೃಪ್ತಿಯ ಭಾವ ಅವರಲ್ಲಿ ಮೂಡಿತ್ತು. 

ಈ ದೃಶ್ಯ ನಗರದ ವಿವಿಧ ಆಸ್ಪತ್ರೆಗಳಲ್ಲಿ ಶನಿವಾರ ಕಂಡುಬಂದಿತು. ಡಾ.ಬಿ.ಸಿ. ರಾಯ್ ಅವರ ಜನ್ಮದಿನದ ಪ್ರಯುಕ್ತ ನಗರದ ವಿವಿಧೆಡೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು. ವಿವಿಧ ಸಂಘ–ಸಂಸ್ಥೆಗಳು ಉತ್ತಮ ಸೇವೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಗೌರವಿಸಿದವು. 

ಭಾರತೀಯ ವೈದ್ಯಕೀಯ ಸಂಘ (ಐಎಂಎ), ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ನ (ಫನಾ) ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು ವೈದ್ಯರ ದಿನ ಆಚರಿಸಿ, ಡಾ.ಬಿ.ಸಿ. ರಾಯ್ ಅವರಿಗೆ ಗೌರವ ಸಲ್ಲಿಸಿದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವೈದ್ಯರ ದಿನ ಆಚರಿಸಿದರು. 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೇರಿ ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು, ಮಣಿಪಾಲ್, ಅಪೋಲೊ, ಫೋರ್ಟಿಸ್, ನಾರಾಯಣ ಹೆಲ್ತ್, ಆಸ್ಟರ್ ಸೇರಿ  ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ವೈದ್ಯರ ದಿನ ಆಚರಣೆ ಮಾಡಲಾಯಿತು. ಶುಶ್ರೂಷಕರು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ತಮ್ಮ ನೆಚ್ಚಿನ ವೈದ್ಯರಿಗೆ ಗುಲಾಬಿ ಹೂಗಳನ್ನು ನೀಡಿ ಶುಭ ಹಾರೈಸಿದರು. 

38 ವೈದ್ಯರಿಗೆ ಪ್ರಶಸ್ತಿ ಪ್ರದಾನ: ಆರೋಗ್ಯ ಇಲಾಖೆಯು ವಿಧಾನಸೌಧಧ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ 38 ವೈದ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಸಮಾಜದಲ್ಲಿ ತಾರತಮ್ಯ ಇರುವ ಕಾರಣಕ್ಕೆ ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ. ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಬಾರದ ರೀತಿಯಲ್ಲಿ ಸರ್ಕಾರಿ ವೈದ್ಯರು ವೃತ್ತಿಪರತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಅಗತ್ಯ ಸವಲತ್ತುಗಳನ್ನು ತಕ್ಕ ಮಟ್ಟಿಗೆ ದೊರಕಿಸಿಕೊಟ್ಟರೂ ಗ್ರಾಮೀಣ ಭಾಗದಲ್ಲಿ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ.  ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್ ರಾಠೋಡ, ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್  ಇದ್ದರು.

ಹಣವಂತರಿಗೆ ಆರೋಗ್ಯ ಸೇವೆ ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆ ಕಷ್ಟದ ಕೆಲಸವಲ್ಲ. ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರಿ ವೈದ್ಯರ ಮೇಲಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ

‘ಸೇವಾ ಮನೋಭಾವ ರೂಢಿಸಿಕೊಳ್ಳಿ’

‘ಮಾನವೀಯತೆ ಅತಃಕರಣದಿಂದ ವೈದ್ಯರು ಬಡವರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಸೇವಾ ಮನೋಭಾವ ಇದ್ದಾಗ ಮಾತ್ರ ಉತ್ತಮ ವೈದ್ಯ ಎನಿಸಿಕೊಂಡು ಜನರಿಗೆ ಹತ್ತಿರವಾಗಲು ಸಾಧ್ಯ. ಆರೋಗ್ಯ ಇಲಾಖೆಯಲ್ಲಿನ ಅಂಗಾಂಗ ತಜ್ಞ ವೈದ್ಯರ ಪ್ರಾವೀಣ್ಯತೆ ಬಡ ಜನರಿಗೂ ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಕಾರ್ಯಕ್ರಮಗಳನ್ನ ಹಾಕಿಕೊಳ್ಳಲಿದೆ’ ಎಂದು ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT