ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ ಪ್ರಜೆಗಳ ಜೊತೆ ಡ್ರಗ್ಸ್ ಲಿಂಕ್: ಸೋನಿಯಾ ಅಗರವಾಲ್‌ ಸೇರಿ ಇಬ್ಬರ ವಶ

Last Updated 31 ಆಗಸ್ಟ್ 2021, 3:40 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ನಗರದಲ್ಲಿ ಮೂವರ ಮನೆಗಳ ಮೇಲೆ ಸೋಮವಾರ ದಾಳಿ ಮಾಡಿದ್ದ ಗೋವಿಂದಪುರ ಪೊಲೀಸರು, ಮಹಿಳಾ ಉದ್ಯಮಿ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

‘ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಥಾಮಸ್ ಕಲ್ಲು ಎಂಬಾತನನ್ನು ಆಗಸ್ಟ್ 12ರಂದು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆಯಿಂದ ದೊರೆತ ಮಾಹಿತಿ ಆಧರಿಸಿ ತನಿಖೆ ಮುಂದುವರಿದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸೌಂದರ್ಯ ವರ್ಧಕ ಮಾರಾಟ ಕಂಪನಿ ಮಾಲೀಕರಾದ ಸೋನಿಯಾ ಅಗರವಾಲ್ ಅವರ ರಾಜಾಜಿನಗರದಲ್ಲಿರುವ ಮನೆ, ಡಿ.ಜೆ. (ಡಿಸ್ಕೊ ಜಾಕಿ) ವಚನ್ ಚಿನ್ನಪ್ಪ ಅವರ ಬೆನ್ಸನ್ ಟೌನ್‌ನಲ್ಲಿರುವ ಮನೆ ಹಾಗೂ ಉದ್ಯಮಿ ಭರತ್ ಅವರ ಬನಶಂಕರಿಯಲ್ಲಿರುವ ಮನೆ ಮೇಲೆ ಇನ್‌ಸ್ಪೆಕ್ಟರ್ ನೇತೃತ್ವದ ತಂಡಗಳು ದಾಳಿ ಮಾಡಿದ್ದವು. ತಪಾಸಣೆ ನಡೆಸಿ ಕೆಲ ವಸ್ತುಗಳನ್ನು ಜಪ್ತಿ ಮಾಡಿವೆ’ ಎಂದೂ ತಿಳಿಸಿದರು.

‘ದಾಳಿಯಲ್ಲಿ ಸಿಕ್ಕ ಕೆಲ ಪುರಾವೆಗಳನ್ನು ಆಧರಿಸಿ ರೂಪದರ್ಶಿಯೂ ಆಗಿರುವ ಸೋನಿಯಾ ಹಾಗೂ ವಚನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ: ‘ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಮೂವರ ಮೇಲಿದೆ. ಆ ಬಗ್ಗೆ ಮಾಹಿತಿ ಕಲೆಹಾಕಲು ನ್ಯಾಯಾಲಯದ ಅನುಮತಿ ಪಡೆದು ಮನೆಗಳ ಮೇಲೆ ದಾಳಿ ಮಾಡಲಾಗಿದೆ’ ಎಂದು ಅಧಿಕಾರಿ ವಿವರಿಸಿದರು.

‘ಥಾಮಸ್ ಕಲ್ಲು ವಾಸವಿದ್ದ ಎಚ್.ಆರ್.ಬಿ.ಆರ್ ಬಡಾವಣೆಯಲ್ಲಿರುವ ಮನೆ ಮೇಲೂ ಇತ್ತೀಚೆಗೆ ದಾಳಿ ಮಾಡಲಾಗಿತ್ತು. ₹ 15.50 ಲಕ್ಷ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಆತನೇ ನಗರದ ಹಲವರಿಗೆ ಡ್ರಗ್ಸ್ ಮಾರುತ್ತಿದ್ದ’ ಎಂದೂ ಹೇಳಿದರು.

‘ಸಿಸಿಬಿ ಪೊಲೀಸರು ಬಯಲು ಮಾಡಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲೂ ಥಾಮಸ್ ಕಲ್ಲು ಹೆಸರು ಕೇಳಿಬಂದಿತ್ತು. ಡ್ರಗ್ಸ್ ಸೇವನೆ ಆರೋಪದಡಿ ಆತನನ್ನು ಬಂಧಿಸಿದ್ದ ಕೆ.ಆರ್.ಪುರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಹೀಗಾಗಿ, ಆತನನ್ನು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT