ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ಔಡಿ ಕಾರು ಜಪ್ತಿ

Published 15 ಜುಲೈ 2023, 18:29 IST
Last Updated 15 ಜುಲೈ 2023, 18:29 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತರಾಗಿ ಚಾಲನೆ ಮಾಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು, ಔಡಿ ಕಾರು ಜಪ್ತಿ ಮಾಡಿದ್ದಾರೆ.

ಕಾರು ಜಪ್ತಿ ವಿಚಾರವಾಗಿ ಸಂಚಾರ ಪೊಲೀಸರು ಹಾಗೂ ಸ್ಥಳೀಯರ ನಡುವೆ ಜಟಾಪಟಿ ನಡೆದಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಾಗಿವೆ. ಜಟಾಪಟಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ರಾಜಕಾರಣಿಯೊಬ್ಬರಿಂದ ಕಾನ್‌ಸ್ಟೆಬಲ್‌ ಗೆ ಕರೆ ಮಾಡಿಸಿದ್ದ ಪಳನಿವೇಲ್, ಪಾನಮತ್ತ ಸ್ಥಿತಿಯಲ್ಲಿ ಕಾರು ಸಮೇತ ಸ್ಥಳದಿಂದ ಹೊರಟು ಹೋಗಲು ಪ್ರಯತ್ನಿಸಿದ್ದ. ಇದಕ್ಕೆ ಕೆಲ ಪೊಲೀಸರು ಸಹಕರಿಸಿದ್ದರು. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವೇ?’ ಎಂದು ಸ್ಥಳೀಯರು ದೂರು ನೀಡಿದ್ದಾರೆ.

ಪ್ರತಿದೂರು ನೀಡಿರುವ ಪೊಲೀಸರು, ‘ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಕೆಲ ಸ್ಥಳೀಯರು, ಮಾಧ್ಯಮದವರ ಹೆಸರು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಾವು ಪುನೀತ್ ಕೆರೆಹಳ್ಳಿ ಕಡೆಯವರೆಂದು ಅವರೆಲ್ಲ ಹೇಳುತ್ತಿದ್ದರು’ ಎಂದು ಆರೋಪಿಸಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಪರಾರಿಗೆ ಯತ್ನ: ‘ಆಸ್ಪತ್ರೆಯೊಂದರ ವಿಭಾಗದ ಮುಖ್ಯಸ್ಥರೆಂದು ಹೇಳಿಕೊಳ್ಳುವ ಪಳನಿವೇಲ್, ಶುಕ್ರವಾರ ರಾತ್ರಿ ಮದ್ಯ ಸೇವಿಸಿ ತಮ್ಮ ಔಡಿ ಕಾರು (ಕೆಎ 03 ಎನ್‌ಸಿ 8338) ಚಲಾಯಿಸಿಕೊಂಡು ಹೊರಟಿದ್ದರು. ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದರು. ಅದನ್ನು ನೋಡಿದ್ದ ಸ್ಥಳೀಯರು, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕಾರು ತಡೆದಿದ್ದ ಪೊಲೀಸರು, ಪಳನಿವೇಲ್‌ನನ್ನು ವಿಚಾರಿಸುತ್ತಿದ್ದರು. ಅದೇ ವೇಳೆ ಸಮೀಪದಲ್ಲಿಯೇ ವಾಹನವೊಂದು ಉರುಳಿಬಿದ್ದು ಅಪಘಾತವಾಗಿತ್ತು. ರಕ್ಷಣೆಗೆಂದು ಎಲ್ಲ ಪೊಲೀಸರು, ಸ್ಥಳಕ್ಕೆ ಓಡಿ ಹೋಗಿದ್ದರು. ಆಗ ಪಳನಿವೇಲ್, ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು’ ಎಂದು ಹೇಳಿವೆ.

ಕಾರು ಅಡ್ಡಗಟ್ಟಿ ಪೊಲೀಸರಿಗೆ ತರಾಟೆ

ಪಳನಿವೇಲ್ ಕಾರು ಅಡ್ಡಗಟ್ಟಿದ್ದ ಸ್ಥಳೀಯರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಳನಿವೇಲ್‌ ಪರಾರಿಯಾಗುತ್ತಿದ್ದರೂ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಥಳೀಯರ ಎದುರೇ ಆಲ್ಕೋಮೀಟರ್‌ ಹಿಡಿದು ಪಳನಿವೇಲ್‌ ಅವರನ್ನು ಪೊಲೀಸರು ತಪಾಸಣೆ ನಡೆಸಿದರು. ಮದ್ಯ ಕುಡಿದಿದ್ದು ಗೊತ್ತಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು, ಕಾರು ಜಪ್ತಿ ಮಾಡಿದರು. ನ್ಯಾಯಾಲಯದಲ್ಲಿ ದಂಡ ಪಾವತಿಸಿ ಕಾರು ಬಿಡಿಸಿಕೊಳ್ಳುವಂತೆ  ನೋಟಿಸ್‌ ನೀಡಿ ಕಳುಹಿಸಿದರು ಎಂಬುದಾಗಿ ಮೂಲಗಳು ಹೇಳಿವೆ.

ಕಮಿಷನ್ ವಂಚನೆ: ಕೆಲಸದಿಂದ ವಜಾ

‘ಸ್ಪರ್ಶ ಆಸ್ಪತ್ರೆಯ ಬ್ರ್ಯಾಂಡಿಂಗ್ ಮುಖ್ಯಸ್ಥರಾಗಿ ಪಳನಿವೇಲ್ ಕೆಲಸ ಮಾಡುತ್ತಿದ್ದರು. 2022–23ನೇ ಸಾಲಿನಲ್ಲಿ ಆಸ್ಪತ್ರೆಯ ಬ್ರ್ಯಾಂಡಿಂಗ್ ಕೆಲಸಕ್ಕಾಗಿ ಸುಮಾರು ₹ 8 ಕೋಟಿ ಬಜೆಟ್‌ ಮಾಡಿ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರಿಂದ ಶೇ 4ರಿಂದ ಶೇ 10ರಷ್ಟು ಕಮಿಷನ್ ಪಡೆದು ಆಸ್ಪತ್ರೆಗೆ ವಂಚಿಸಿದ್ದರು. ಈ ಸಂಬಂಧ ಆಸ್ಪತ್ರೆಯ ಸಿಇಒ ಜೋಸೆಫ್ ಅವರು ವಿಧಾನಸೌಧ ಠಾಣೆಗೆ ಫೆ. 3ರಂದು ದೂರು ನೀಡಿದ್ದರು. ಇದಾದ ನಂತರ ಪಳನಿವೇಲ್‌ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಔಡಿ ಕಾರು ಖರೀದಿಸಿದ್ದ ಪಳನಿವೇಲ್ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT