ಗುರುವಾರ , ಫೆಬ್ರವರಿ 25, 2021
31 °C
ಕಳಪೆ ಮದ್ಯ ಸೇವನೆ ಶಂಕೆ; ಪೊಲೀಸರ ತನಿಖೆ

ಮದ್ಯದ ಅಮಲಿನಲ್ಲೇ ಪ್ರಾಣ ಬಿಟ್ಟ ಚಾಲಕ: ರೌಡಿ ದಡಿಯಾ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಮದ್ಯದ ಅಮಲಿನಲ್ಲೇ ಚಾಲಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. ರೌಡಿಯೊಬ್ಬನ ಕೊಲೆ ಆಗಿದೆ.

ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ತೋಟದಲ್ಲಿ ಚಾಲಕ ಮುರಳಿ (33) ಎಂಬುವರು ಮೃತಪಟ್ಟಿದ್ದಾರೆ. ಅವರು ಕುಡಿದಿದ್ದ ಮದ್ಯ ಕಳಪೆಯಾಗಿತ್ತೆಂಬ ಅನುಮಾನವಿದೆ. ಅದನ್ನು ಅವರು ಎಲ್ಲಿಂದ ತಂದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ದಿವಂಗತ ವೈ. ಕೃಷ್ಣಪ್ಪ ಎಂಬುವರ ತೋಟಕ್ಕೆ ಹೋಗಿದ್ದ ಮುರಳಿ, ಅಲ್ಲಿಯೇ ಮದ್ಯ ಕುಡಿದಿದ್ದರು. ಅದೇ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಮೃತದೇಹವಿದ್ದ ಸ್ಥಳದಲ್ಲಿ ಮದ್ಯದ ಬಾಟಲಿ ಸಿಕ್ಕಿದೆ. ಕಡಿಮೆ ಬೆಲೆಗೆ ಸಿಗುವ ಮದ್ಯ ಇದಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಮದ್ಯದ ಸೇವನೆಯಿಂದ ಸಾವು ಸಂಭವಿಸಿದೆಯಾ? ಅಥವಾ ಬೇರೆ ಏನಾದರೂ ಕಾರಣ ಇತ್ತಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದರು.

ರೌಡಿ ದಡಿಯಾ ಕೊಲೆ: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಮದ್ಯದ ಪಾರ್ಟಿ ವೇಳೆಯೇ ರೌಡಿ ಶೀಟರ್‌ ಅಶೋಕ ಅಲಿಯಾಸ್ ದಡಿಯಾ ಎಂಬಾತನನ್ನು ಕೊಲೆ ಮಾಡಲಾಗಿದೆ.

‘ಸ್ಥಳೀಯ ನಿವಾಸಿಯಾದ ಅಶೋಕ ಹಾಗೂ ಸ್ನೇಹಿತರು, ಭಾರತಿ ನಗರದಲ್ಲಿ ಮದ್ಯ ಪಾರ್ಟಿ ಆಯೋಜಿಸಿದ್ದರು. ಮದ್ಯ ಕುಡಿದ ನಂತರ, ವೈಯುಕ್ತಿಕ ವಿಚಾರವಾಗಿ ಜಗಳ ಶುರುವಾಗಿತ್ತು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ನೇಹಿತರೇ ದಡಿಯಾನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು