ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಸುದ್ದಿ | ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್

ಟೆಕಿ ಬಂಧನ: ನಟ ವಿಜಯ ದೇವರಕೊಂಡ ಗಮನ ಸೆಳೆಯಲು ಕೃತ್ಯ
Last Updated 15 ಮಾರ್ಚ್ 2020, 22:36 IST
ಅಕ್ಷರ ಗಾತ್ರ

ಬೆಂಗಳೂರು:‘ಇನ್ಫೊಸಿಸ್‌ ಫೌಂಡೇಷನ್‌’ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದ ಆರೋಪದಡಿ ಸಾಫ್ಟ್‌ವೇರ್ ಎಂಜಿನಿಯರ್ ಲಾವೆಂಟಿ ಸಾಯಿಕೃಷ್ಣ (24) ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಹೈದರಾಬಾದ್‌ನಲ್ಲಿ ವಾಸವಿದ್ದ ಸಾಯಿಕೃಷ್ಣ, ತನ್ನದೇ ಆದ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿದ್ದ. ಅದರ ಬ್ರಾಂಡ್ ಅಂಬಾಸಿಡರ್ ಹಾಗೂ ಪಾರ್ಟನರ್‌ ಆಗುವಂತೆ ನಟ ವಿಜಯ್ ದೇವರಕೊಂಡ ಅವರನ್ನು ಸೆಳೆಯಲು ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಕೃತ್ಯದ ಬಗ್ಗೆ‘ಇನ್ಫೊಸಿಸ್ ಫೌಂಡೇಷನ್’ ಕಚೇರಿ ನೌಕರ ಎಂ. ರಮೇಶ್ ಅವರು 2019ರಲ್ಲಿ ದೂರು ನೀಡಿದ್ದರು. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಡಿ ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.’

‘ವಿಜಯವಾಡದ ನಿವಾಸಿ ಆಗಿದ್ದ ಸಾಯಿಕೃಷ್ಣ, ಕೃತ್ಯ ಬಯಲಾಗುತ್ತಿದ್ದಂತೆ ಹೈದರಾಬಾದ್‌ಗೆ ಹೋಗಿ ತಲೆಮರೆಸಿಕೊಂಡಿದ್ದ. ಆತನಿಗಾಗಿ ಹಲವೆಡೆ ಹುಡುಕಾಟ ನಡೆಸಲಾಗುತ್ತಿತ್ತು. ಶನಿವಾರ ರಾತ್ರಿ ಹೈದರಾಬಾದ್‌ನಲ್ಲೇ ಈತ ಸಿಕ್ಕಿಬಿದ್ದ’ ಎಂದರು.

ಅಂತರ್ಜಾಲದಿಂದ ಲೆಟರ್ ಡೌನ್‌ಲೋಡ್‌: ‘ಕಂಪನಿಯೊಂದನ್ನು ಸ್ಥಾಪಿಸಿದ್ದ ಆರೋಪಿ ಸಾಯಿಕೃಷ್ಣ, ’ಆಫರ್ಸ್ ನಿಯರ್ ಬೈ’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದ. ಅದರ ಪ್ರಚಾರಕ್ಕೆ ನಟ ವಿಜಯ್ ದೇವರಕೊಂಡ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ನಿಶ್ಚಯಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಎರಡು ಬಾರಿ ಪ್ರಯತ್ನಿಸಿದರೂ ವಿಜಯ್ ದೇವರಕೊಂಡ ಅವರನ್ನ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಹೇಗಾದರೂ ಮಾಡಿ ಅವರನ್ನು ತನ್ನತ್ತ ಸೆಳೆಯಬೇಕು ಎಂದುಕೊಂಡಿದ್ದ ಆರೋಪಿ, ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಮಾದರಿ ಹಾಗೂ ಸಹಿಯನ್ನು ಅಂತರ್ಜಾಲದ ಮೂಲಕ ಡೌನ್‌ಲೋಡ್‌ ಮಾಡಿಕೊಂಡಿದ್ದ.’

‘ನಮ್ಮ ಕಂಪನಿಯು ‘ಆಫರ್ಸ್ ನಿಯರ್ ಬೈ’ ಎಂಬ ಮೊಬೈಲ್ ಆ್ಯಪ್ ತೆರೆಯುತ್ತಿದೆ. ಅದಕ್ಕೆ ನೀವು ಬ್ರಾಂಡ್ ಅಂಬಾಸಿಡರ್ ಅಥವಾ ಪಾರ್ಟ್‌ನರ್ ಆಗಿ ಬರಬೇಕು’ ಎಂದು ಸುಧಾಮೂರ್ತಿ ಅವರು ಬರೆದ ರೀತಿಯಲ್ಲೇ ಲೆಟರ್‌ ಹೆಡ್ ಸಿದ್ಧಪಡಿಸಿದ್ದ. ಆ ಪತ್ರವನ್ನು ‘ವಿಜಯ್ ದೇವರಕೊಂಡ, ಮೈತ್ರಿ ಮೂವಿ ಮೇಕರ್ಸ್, ಕಮಲಗಿರಿ ಟವರ್ಸ್, ಮಧುರಾನಗರ, ತೆಲಂಗಾಣ’ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಕಳುಹಿಸಿದ್ದ.’

‘ಪತ್ರ ಸ್ವೀಕರಿಸಿದ್ದ ನಟನ ಕಚೇರಿಯವರು ಹೆಚ್ಚಿನ ಮಾಹಿತಿ ಪಡೆಯಲು ‘ಇನ್ಫೋಸಿಸ್ ಫೌಂಡೇಷನ್‌’ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅವಾಗಲೇ ಆರೋಪಿ ಕೃತ್ಯ ಬಯಲಾಗಿತ್ತು’ ಎಂದು ಪೊಲೀಸರು ವಿವರಿಸಿದರು.

ಪೊಲೀಸರ ಮೇಲೆ ಹಲ್ಲೆ: ಇಬ್ಬರ ಬಂಧನ

ರಾಜರಾಜೇಶ್ವರಿ ನಗರ ಠಾಣೆ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಎಂ. ದಾಸ್ ಹಾಗೂ ದರ್ಶನ್ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಕಾನ್‌ಸ್ಟೇಬಲ್‌ಗಳಾದ ಸತೀಶ್ ಮತ್ತು ಪ್ರಕಾಶ್, ಮಾ. 13ರಂದು ಬೆಳಿಗ್ಗೆ ಕರ್ತವ್ಯದಲ್ಲಿದ್ದರು. ಜ್ಞಾನಾಕ್ಷಿ ಶಾಲೆ ಬಳಿ ಎರಡು ವಾಹನಗಳ ನಡುವೆ ಅಪಘಾತ ಉಂಟಾಗಿತ್ತು. ಅದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ಬಂದಿತ್ತು. ಕಾನ್‌ಸ್ಟೆಬಲ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಾನ್‌ಸ್ಟೆಬಲ್‌ಗಳು ಸ್ಥಳಕ್ಕೆ ಹೋದಾಗಲು ಅಪಘಾತ ವಿಚಾರವಾಗಿ ಸ್ಥಳದಲ್ಲಿ ಎರಡು ಗುಂಪಿನ ನಡುವೆ ಜಗಳ ನಡೆಯುತ್ತಿತ್ತು. ಅದನ್ನು ಬಿಡಿಸಲು ಹೋದಾಗ ಕಾನ್‌ಸ್ಟೆಬಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು ಹಲ್ಲೆ ಮಾಡಿದ್ದರು. ರಸ್ತೆಯಲ್ಲೇ ಸಮವಸ್ತ್ರ ಹಿಡಿದು ಎಳೆದಾಡಿದ್ದರು’ ಎಂದು ಮಾಹಿತಿ ನೀಡಿದರು.

ಉದ್ಯೋಗದ ಆಮಿಷವೊಡ್ಡಿ ವೇಶ್ಯಾವಾಟಿಕೆ

ಉದ್ಯೋಗದ ಆಮಿಷವೊಡ್ಡಿ ಹೊರ ರಾಜ್ಯಗಳಿಂದ ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಯುವತಿಯೊಬ್ಬರನ್ನು ರಕ್ಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜಯಮ್ಮ (52) ಬಂಧಿತರು. ಇವರ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರ್‌.ಎಂ.ಸಿ ಯಾರ್ಡ್‌ನ ಅನಿಲ್ ಹಾಗೂ ಕುಳ್ಳನಾಗ ತಲೆಮರೆಸಿಕೊಂಡಿದ್ದಾರೆ.

‘ನಗರದ ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿ ಮನೆ ಮಾಡಿದ್ದ ಜಯಮ್ಮ ಹಾಗೂ ಇತರೆ ಆರೋಪಿಗಳು, ತಮ್ಮದೇ ಜಾಲ ಸೃಷ್ಟಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಯುವತಿಯರನ್ನು ಉದ್ಯೋಗದ ಆಮಿಷವೊಡ್ಡಿ ಕರೆತರುತ್ತಿದ್ದರು. ಮನೆಯ ಕೊಠಡಿಯೊಂದರಲ್ಲಿ ಯುವತಿಯರನ್ನು ಅಕ್ರಮ ಬಂಧನದಲ್ಲಿಡುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು. ‘ಅನಿಲ್ ಹಾಗೂ ಕುಳ್ಳನಾಗನೇ ವೇಶ್ಯಾವಾಟಿಕೆಗೆ ಗಿರಾಕಿಗಳನ್ನು ಹುಡುಕಿಕೊಂಡು ಬರುತ್ತಿದ್ದರು. ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ವಾಟ್ಸ್‌ಆ್ಯಪ್‌ನಲ್ಲಿಯೇ ಯುವತಿಯರ ಫೋಟೊಗಳನ್ನು ಕಳುಹಿಸುತ್ತಿದ್ದರು. ನಂತರ, ಗಿರಾಕಿಗಳನ್ನು ನಿಗದಿ ಜಾಗಕ್ಕೆ ಆಹ್ವಾನಿಸಿ ಬಳಿಕ ತಾವೇ ಮನೆಗೆ ಕರೆದೊಯ್ಯುತ್ತಿದ್ದರು.’

‘ಈ ವೇಶ್ಯಾವಾಟಿಕೆ ಜಾಲದ ಬಗ್ಗೆ ಇತ್ತೀಚೆಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಮನೆ ಮೇಲ ದಾಳಿ ಮಾಡಲಾಯಿತು.’

‘ದಾಳಿ ವೇಳೆ ಎರಡು ಮೊಬೈಲ್ ಹಾಗೂ ₹2 ಸಾವಿರ ನಗದು ಜ‍ಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಅನಿಲ್ ಹಾಗೂ ಕುಳ್ಳ ನಾಗನ ಬಂಧನಕ್ಕೆ ಬಲೆ ಬೀಸಲಾಗದೆ’ ಎಂದು ಅಧಿಕಾರಿ ತಿಳಿಸಿದರು.

ಆಭರಣ ಪಾಲಿಶ್ ನೆಪದಲ್ಲಿ ಚಿನ್ನ ಕದ್ದ

ಆಭರಣ ಪಾಲಿಶ್ ಮಾಡುವ ನೆಪದಲ್ಲಿ ವಂಚಕನೊಬ್ಬ ಚಿನ್ನ ಕದ್ದೊಯ್ದಿದ್ದು, ಈ ಸಂಬಂಧ ಬಾಗಲಕುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 38 ವರ್ಷದ ಮಹಿಳೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆ ತನ್ನ ಮಗಳೊಂದಿಗೆ ಇದೇ 12ರಂದು ಮಧ್ಯಾಹ್ನ ಮನೆಯಲ್ಲಿದ್ದರು. ಆಗ ಮನೆಗೆ ಬಂದಿದ್ದ ಅಪರಿಚಿತ, ಚಿನ್ನ ಹಾಗೂ ಬೆಳ್ಳಿ ಆಭರಣ ಪಾಲಿಶ್ ಮಾಡುವ ಪೌಡರ್‌ ಕಂಪನಿಯಿಂದ ಜಾಹೀರಾತು ಮಾಡಲು ಬಂದಿರುವುದಾಗಿ ಹೇಳಿದ್ದ. ಆಭರಣಗಳನ್ನು ಕೊಟ್ಟರೆ ಪಾಲಿಶ್ ಮಾಡಿಸಿ ತೋರಿಸುವುದಾಗಿಯೂ ತಿಳಿಸಿದ್ದ.’

‘ಆರೋಪಿ ಮಾತು ನಂಬಿದ್ದ ಮಹಿಳೆ, 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿಕೊಟ್ಟಿದ್ದರು. ಕೆಲ ನಿಮಿಷ ಸರವನ್ನು ಪಾಲಿಶ್ ಮಾಡಿದ್ದ ಆರೋಪಿ, ವಾಪಸು ಮಹಿಳೆಗೆ ಕೊಟ್ಟಿದ್ದ. 10 ನಿಮಿಷ ಬಿಟ್ಟು ನೀರಿನಲ್ಲಿ ಸರವನ್ನು ತೊಳೆಯಿರಿ ಹೊಳೆಯುತ್ತದೆ ಎಂಬುದಾಗಿ ಹೇಳಿ ಸ್ಥಳದಿಂದ ಹೊರಟು ಹೋಗಿದ್ದ’ ಎಂದು ಪೊಲೀಸರು ವಿವರಿಸಿದರು.

‘10 ನಿಮಿಷಗಳ ಸರವನ್ನು ತೊಳೆದಾಗ ಅದರ ತೂಕ ಕಡಿಮೆ ಇರುವುದು ಗಮನಕ್ಕೆ ಬಂದಿತ್ತು. ಮಳಿಗೆಗೆ ಹೋಗಿ ತೂಕ ಮಾಡಿಸಿದಾಗ 16 ಗ್ರಾಂನಷ್ಟು ಕಡಿಮೆ ಇತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT