ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

56 ಲಕ್ಷ ಮೌಲ್ಯದ ನಕಲಿ ಸ್ಯಾನಿಟೈಸರ್‌ ವಶ: ಇಬ್ಬರ ಬಂಧನ

Last Updated 20 ಮಾರ್ಚ್ 2020, 22:55 IST
ಅಕ್ಷರ ಗಾತ್ರ

ಬೆಂಗಳೂರು: ಜನರ ಮನಸಿನಲ್ಲಿ ಸೃಷ್ಟಿಯಾಗಿರುವ ಕೊರೊನಾ ವೈರಾಣು ಭೀತಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಸ್ಯಾನಿಟೈಸರ್‌/ಹ್ಯಾಂಡ್‌ರಬ್‌ ತಯಾರಿಸಿ ದುಬಾರಿ ಬೆಲೆಗೆ ಮಾರುತ್ತಿದ್ದ ರಾಸಾಯನಿಕ ಗೋದಾಮುಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ₹56 ಲಕ್ಷದ ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಹೊಸ ತರಗುಪೇಟೆಯ ಜ್ಯೋತಿ ಕೆಮಿಕಲ್ಸ್‌ ಮತ್ತು ಕಸ್ತೂರಬಾ ನಗರದ ಅಶ್ವತ್ಥಕಟ್ಟೆ ರಸ್ತೆಯ ಸ್ವಾತಿ ಮತ್ತು ಕೋ ಗೋದಾಮುಗಳ ಮೇಲೆ ದಾಳಿ ಮಾಡಿ 35 ಲೀಟರ್‌ನ ಎಂಟು ಐಸೊಪ್ರೊಪಿಲ್‌ ಆಲ್ಕೋಹಾಲ್‌ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ಆರೋಪಿಗಳಾದ ಕಸ್ತೂರಬಾ ನಗರದ ರಾಜು (43) ಹಾಗೂ ಚಾಮರಾಜಪೇಟೆಯ ಎಸ್‌ಎಲ್‌ವಿ ರೆಸಿಡೆನ್ಸಿ ನಿವಾಸಿ ಚಂದನ್‌ (64) ಅವರ ವಿರುದ್ಧ ವಿ.ವಿ ಪುರ ಮತ್ತು ಚಾಮರಾಜಪೇಟೆ ಠಾಣೆಗಳಲ್ಲಿ ಡ್ರಗ್ಸ್‌ ಮತ್ತು ಕಾಸ್ಮೆಟಿಕ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಬಂಧಿತರು 100 ಎಂ.ಎಲ್‌, 120 ಎಂ.ಎಲ್‌, 200 ಎಂ.ಎಲ್‌ ಮತ್ತು 500 ಎಂ.ಎಲ್‌ನ ಒಟ್ಟು 8,500 ಬಾಟಲ್‌ಗಳಲ್ಲಿ ಸ್ಯಾನಿಟೈಸರ್‌ಗಳನ್ನು ತುಂಬಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. 4500 ಖಾಲಿ ಬಾಟಲ್‌ ಹಾಗೂ 4500 ಸ್ಟಿಕ್ಕರ್‌ಗಳನ್ನು ಗೋದಾಮಿನಲ್ಲಿ ಇಟ್ಟಿದ್ದರು. ಇವುಗಳನ್ನು ಜಪ್ತಿ ಮಾಡಲಾಗಿದೆ.

ಆರೋ‍ಪಿಗಳು 50 ಲೀಟರ್‌ ಐಸೊಪ್ರೊಪಿಲ್‌ ಆಲ್ಕೋಹಾಲ್‌ಗೆ 15ರಿಂದ 20 ಎಂ.ಎಲ್‌ (ಒಂದೂವರೆ ಚಮಚದಷ್ಟು) ನೀಲಿ ಬಣ್ಣ (ಬ್ರಿಲಿಯಂಟ್‌ ಬ್ಲೂ ಕಲರ್‌) ಮತ್ತು 10– 15 ಎಂ.ಎಲ್‌ (ಒಂದು ಚಮಚ) ಸುಗಂಧ ಮಿಶ್ರಣ ಮಾಡಿ ಸ್ಯಾನಿಟೈಸರ್‌ ಸಿದ್ಧಪಡಿಸಿ ಕ್ರಮವಾಗಿ ₹ 170, ₹ 325, ₹ 620 ದರ ನಿಗದಿಪಡಿಸಿ ಕಂಪನಿ ಸ್ಟಿಕ್ಕರ್‌ಗಳನ್ನು ಹಚ್ಚಿ ರಟ್ಟಿನ ಡಬ್ಬಗಳಲ್ಲಿ ತುಂಬಿ ಮಾರುಕಟ್ಟೆಗೆ ವಿತರಣೆ ಮಾಡುತ್ತಿದ್ದರು ಎಂದು ಪೊಲೀಸ್‌ ಕಮಿಷನರ್‌ ವಿವರಿಸಿದರು.

ಐಸೊಪ್ರೊ‍ಪಿಲ್‌ ಆಲ್ಕೋಹಾಲ್‌ನ ಬೆಲೆ ಲೀಟರ್‌ಗೆ ₹ 80 ರೂಪಾಯಿ ಇದ್ದು, ಬಂಧಿತರು ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್‌ಗಿರುವ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು ದುಬಾರಿ ಬೆಲೆಗೆ ಮಾರುವ ಮೂಲಕ ಜನರನ್ನು ವಂಚಿಸುತ್ತಿದ್ದರು ಎಂದು ಅವರು ವಿವರಿಸಿದರು.

ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT