ಗುರುವಾರ , ಡಿಸೆಂಬರ್ 5, 2019
19 °C
ಶೆಲ್‌ ಟ್ರ್ಯಾಕ್‌ನಲ್ಲಿ ಇಂಧನ ಉಳಿಕೆಯ ಸಾಧ್ಯತೆ ಪ್ರದರ್ಶನ

ಆವಿಷ್ಕಾರಕ್ಕೆ ವೇದಿಕೆಯಾದ ಇಕೊ ಮ್ಯಾರಥಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾಹನಗಳಲ್ಲಿ ಇಂಧನದ ಉಳಿತಾಯ, ಅಧಿಕ ಮೈಲೇಜ್ ಹಾಗೂ ಮಾಲಿನ್ಯ ನಿಯಂತ್ರಣ ಅಸಾಧ್ಯವಲ್ಲ ಎನ್ನುವುದನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ‘ಶೆಲ್‌ ಇಕೊ ಮ್ಯಾರ ಥಾನ್‌’ನಲ್ಲಿ ಸಾಬೀತು ಮಾಡಿದರು. 

ಶೆಲ್ ಕಂಪನಿ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ದೇಶದ 24 ಎಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ವಿನ್ಯಾಸ ಮಾಡಿದ ಪರಿಸರಸ್ನೇಹಿ ಕಾರುಗಳು ಅಧಿಕ ಇಂಧನ ಕ್ಷಮತೆಯನ್ನು ಸಾರುವ ಜತೆಗೆ ದೇಶೀಯ ವಿನ್ಯಾಸದ ಅವಕಾಶಗಳನ್ನು ಅನಾವರಣ ಮಾಡಿದವು. ಅತ್ಯಧಿಕ ಮೈಲೇಜ್‌ ನೀಡುವ ಕಾರನ್ನು ಅಭಿವೃದ್ಧಿಪಡಿಸಿದ್ದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಅವೆರೆರಾ ತಂಡ, ವಿದ್ಯುತ್ ಬ್ಯಾಟರಿ ಆಧಾರಿತ ಕಾರನ್ನು ತಯಾರಿಸಿರುವ ಇಂದಿರಾ ಗಾಂಧಿ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಈಥಾನ್ ತಂಡ, ಮುಂಬೈನ ಕೆ.ಜೆ. ಸೋಮಯ್ಯ ಎಂಜಿನಿಯರಿಂಗ್ ಕಾಲೇಜಿನ ಇಟಾ ತಂಡ ಹಾಗೂ ಬಾರ್ಟಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರವೇಗಾ ತಂಡದ ಕಾರುಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. 

ಮ್ಯಾರಥಾನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಐಟಿ ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ತಾಂತ್ರಿಕ ಪರಿಣಿತರನ್ನು ಹೊಂದಿದೆ. ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಸಮರ್ಥನೀಯ ಬಳಕೆ ಬಗ್ಗೆ ಆವಿಷ್ಕಾರಗಳು ಹೆಚ್ಚಬೇಕು. ಪೆಟ್ರೋಲಿಯಂ ಉತ್ಪನ್ನ ಗಳಿಗೆ ಪರ್ಯಾಯ ಇಂಧನವನ್ನು ಕಂಡುಕೊಳ್ಳಬೇಕು’ ಎಂದು ತಿಳಿಸಿದರು. 

ಭಾರತೀಯ ಶೆಲ್ ಕಂಪನಿಗಳ ಅಧ್ಯಕ್ಷ ನಿತಿನ್ ಪ್ರಸಾದ್, ‘ ಪರಿಸರಸ್ನೇಹಿ ವಾಹನಗಳಿಗೆ ಆದ್ಯತೆ ನೀಡುವ ಜತೆಗೆ ಇಂಧನದ ಮಿತ ಬಳಕೆಗೆ ದಾರಿ ಕಂಡುಕೊಳ್ಳಬೇಕು’ ಎಂದರು.

ಶುಕ್ರವಾರವೂ ಸ್ಪರ್ಧೆ ನಡೆಯಲಿದ್ದು, ವಿಜೇತ ತಂಡಗಳಿಗೆ ₹ 22 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. 

ಪ್ರತಿಕ್ರಿಯಿಸಿ (+)