ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಮಗಿರಿ ಸೃಷ್ಟಿಸಲಿರುವ ಶಿಕ್ಷಣ: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಳವಳ

Last Updated 13 ಸೆಪ್ಟೆಂಬರ್ 2020, 7:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ರೂಪಿಸಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ–2020’ ಯಥಾವತ್ತಾಗಿ ಜಾರಿಯಾದಲ್ಲಿ ಶಿಕ್ಷಣದಿಂದಲೇ ಗುಲಾಮಗಿರಿ ಸೃಷ್ಟಿಯಾಗಲಿದೆ. ಕಲಿಕೆ, ವೃತ್ತಿ, ಸಂಸ್ಕೃತಿ, ಊಟ, ಉಡುಗೆ ಎಲ್ಲವನ್ನೂ ಕೆಲವರೇ ನಿರ್ಧರಿಸುವಂತಹ ವಾತಾವರಣ ಸೃಷ್ಟಿಯಾಗಲಿದೆ’ ಎಂದು ಮೈಸೂರಿನ ಸುತ್ತೂರು ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಲ್‌. ಜವಾಹರ್‌ ನೆಸನ್‌ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಶಿಕ್ಷಣ ಉಳಿಸಿ ರಾಷ್ಟ್ರೀಯ ಸಮಿತಿ (ಎಐಎಸ್‌ಇಸಿ)– ಕರ್ನಾಟಕ ಶನಿವಾರ ಆಯೋಜಿಸಿದ್ದ ವರ್ಚುವಲ್‌ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಹೇಗಿರಬೇಕು? ಮತ್ತು ಏನನ್ನು ಒಳಗೊಂಡಿರಬೇಕು ಎಂಬುದನ್ನು ಸಮಾಜವೇ ನಿರ್ಧರಿಸಬೇಕು. ಸಮಾಜ ಪ್ರಣೀತ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಎಲ್ಲ ಜನರ ಜೀವನಮಟ್ಟ ಸುಧಾರಣೆ ಸಾಧ್ಯ’ ಎಂದರು.

‘ಹೊಸ ಶಿಕ್ಷಣ ನೀತಿಯು ಮಾರುಕಟ್ಟೆ ಪ್ರಣೀತ ಹಾಗೂ ಅಧಿಕಾರ ಕೇಂದ್ರದಲ್ಲಿ ಇರುವವರ ಆಶಯಕ್ಕೆ ತಕ್ಕಂತೆ ರೂಪುಗೊಂಡಿದೆ. ರಾಜ್ಯವೇ ನಿರ್ಧರಿಸಬೇಕಾದ ವಿಷಯದಲ್ಲಿ ಅಧಿಕಾರ ಕೇಂದ್ರೀಕರಣಕ್ಕೆ ದಾರಿ ಮಾಡಿಕೊಡಲಿದೆ. ಒಂದು ಗುಂಪಿನ ಜನರು ಇಡೀ ದೇಶದ ಜನಸಮುದಾಯದ ಮೇಲೆ ತಮ್ಮ ಯೋಚನೆ ಮತ್ತು ಯೋಜನಗಳನ್ನು ಹೇರುವುದಕ್ಕೆ ನಾಂದಿ ಹಾಡಲಿದೆ’ ಎಂದು ಹೇಳಿದರು.

ಪ್ರಜಾತಂತ್ರ ವಿರೋಧಿ ನೀತಿ

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್‌ ಮಾತನಾಡಿ, ‘ಈಗ ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸಂಪೂರ್ಣವಾಗಿ ಅಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ. ಇದು ಸಮಗ್ರ ಭಾರತ ಕೇಂದ್ರಿತ ಶಿಕ್ಷಣ ನೀತಿ ಎಂಬುದು ಸುಳ್ಳು. ಈ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಮತ್ತು ಗೊಂದಲ ಸೃಷ್ಟಿಸಲಿದೆ’ ಎಂದರು.

ಶಿಕ್ಷಣ ನೀತಿ ರೂಪಿಸಿದವರಲ್ಲೇ ಈ ಕುರಿತು ಖಚಿತತೆ ಇಲ್ಲ. ಸಂಸತ್ತಿನಲ್ಲಿ ಚರ್ಚೆ ನಡೆಸದೇ ಅನುಷ್ಠಾನಕ್ಕೆ ತರುವ ಯತ್ನ ನಡೆದಿದೆ. ಪ್ರಧಾನಿಯನ್ನು ಓಲೈಸಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಶಿಕ್ಷಣದ ಸಚಿವರು ಈ ನೀತಿಯ ಅನುಷ್ಠಾನಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಕರ್ನಾಟಕದ ಎಲ್ಲ ಜ್ಞಾನ ಪರಂಪರೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಎಐಎಸ್‌ಇಸಿ ಉಪಾಧ್ಯಕ್ಷ ಪ್ರೊ.ಧ್ರುವ ಜ್ಯೋತಿ ಮುಖರ್ಜಿ ಮಾತನಾಡಿ, ‘ವೈರುಧ್ಯಗಳೇ ತುಂಬಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿಯು ಸಾಮಾನ್ಯ ಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಿದೆ. ದೇಶದಲ್ಲಿ ಗೊಂದಲ ಸೃಷ್ಟಿಸುವುದೇ ನೀತಿಯ ಗುರಿ ಇದ್ದಂತಿದೆ’ ಎಂದು ಟೀಕಿಸಿದರು.

ಎಐಎಸ್‌ಇಸಿ ರಾಜ್ಯ ಮಂಡಳಿ ಸದಸ್ಯ ವಿ.ಎನ್‌.ರಾಜಶೇಖರ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT