ಮುಖ್ಯ ಆಯುಕ್ತರಿಗೆ ಹೇಳಿದ್ದರೂ ಕ್ರಮವಾಗಿಲ್ಲ: ರಾಮಲಿಂಗಾರೆಡ್ಡಿ
‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯ ಟೆಂಡರ್ ನಾಲ್ಕನೇ ಬಾರಿಗೆ ಕರೆಯಲಾಗಿದ್ದು ಎಲ್ಲ ತಾಂತ್ರಿಕ ಪ‍್ರಕ್ರಿಯೆ ಮುಗಿಸಲಾಗಿದೆ. ಅಂತಿಮ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಿ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನಾಲ್ಕಾರು ಬಾರಿ ಹೇಳಿದ್ದೇನೆ. ಅವರು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಬಿಜೆಪಿ ಸರ್ಕಾರ ನಮ್ಮ ಮೇಲಿನ ದ್ವೇಷದಿಂದ ಮುಂದುವರಿಸಲಿಲ್ಲ. ಈ ಕಾಮಗಾರಿಯನ್ನು ನಮ್ಮ ಸರ್ಕಾರ ಬಂದ ಕೂಡಲೇ ಮುಂದುವರಿಸಿ 12 ತಿಂಗಳಲ್ಲಿ ಮುಗಿಸುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಆದರೆ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಟೆಂಡರ್ ಅನುಮೋದನೆ ನೀಡಿ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.