ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪುರ ಮೇಲ್ಸೇತುವೆ: ಸಾಮರ್ಥ್ಯ ಪರೀಕ್ಷೆ ಆರಂಭ

Published 19 ಜನವರಿ 2024, 17:44 IST
Last Updated 19 ಜನವರಿ 2024, 17:44 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಈಜಿಪುರ ಎಲಿವೇಟೆಡ್‌ ಕಾರಿಡಾರ್ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದನ್ನು ಮುಂದುವರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಪರೀಕ್ಷೆಗಳು ನಡೆಯುತ್ತಿವೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರೊ. ಚಂದ್ರಕಿಶನ್‌ ಅವರ ಸೂಚನೆ ಮೇರೆಗೆ ಬ್ಯೂತೊ ವೆರಿಟಾಸ್‌ ಏಜೆನ್ಸಿಯ ಡಾ. ಕುಮಾರ್‌ ಅವರ ತಂಡ ಪರೀಕ್ಷೆಗಳನ್ನು ಶುಕ್ರವಾರ ನಡೆಸಿದರು. 

ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಗಳಾಗಿರುವುದರಿಂದ, ಯಾವ ಪ್ರಮಾಣದಲ್ಲಿ ತುಕ್ಕು ಹಿಡಿದಿದೆ, ಕಾಂಕ್ರೀಟ್‌ ಗುಣಮಟ್ಟ ಹೇಗಿದೆ, ಬಿರುಕು ಬಿಟ್ಟಿರುವ ಪರಿಣಾಮ ಯಾವ ಮಟ್ಟದ್ದು ಸೇರಿದಂತೆ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಯಿತು.

‘ಈ ಪರೀಕ್ಷೆಗಳ ವರದಿಯನ್ನು ನಾಲ್ಕೈದು ದಿನಗಳಲ್ಲಿ ಐಐಎಸ್‌ಸಿಗೆ ಏಜೆನ್ಸಿ ನೀಡಲಿದೆ. ಅದರ ನಂತರ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಯಾವ ರೀತಿಯಲ್ಲಿ ಮುಂದುವರಿಸಬೇಕು ಎಂಬ ಮಾರ್ಗದರ್ಶನದ ವರದಿಯನ್ನು ಐಐಎಸ್‌ಸಿ ನೀಡಲಿದೆ. ಅದರಂತೆ ಕಾಮಗಾರಿಯನ್ನು ನಡೆಸಲಾಗುತ್ತದೆ. ವರದಿ ಬರುವವರೆಗೂ‌ ರ‍್ಯಾಂಪ್‌ಗಳ ಕಾಮಗಾರಿ ನಡೆಸಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಎಂಜಿನಿಯರ್‌ ತಿಳಿಸಿದರು.

2017ರಲ್ಲಿ ರೂಪುಗೊಂಡಿದ್ದ ಈಜಿಪುರ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಕಾಮಗಾರಿ 2021ರಲ್ಲಿ ಗುತ್ತಿಗೆ ರದ್ದಾಗಿದ್ದರಿಂದ ಸ್ಥಗಿತಗೊಂಡಿತ್ತು. ಕಾಮಗಾರಿ ಪುನರಾರಂಭದ ಟೆಂಡರ್‌ಗೆ ಸಚಿವ ಸಂಪುಟ 2023ರ ಸೆಪ್ಟೆಂಬರ್‌ 7ರಂದು ಅನುಮೋದನೆ ನೀಡಿತ್ತು. ₹176.11 ಕೋಟಿಗೆ ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯೊಂದಿಗೆ ‘ಟರ್ನ್‌ ಕೀ ಲಂಪ್‌ಸಮ್‌’ ಗುತ್ತಿಗೆಯ ಒಪ್ಪಂದಕ್ಕೆ ಬಿಬಿಎಂಪಿ ನವೆಂಬರ್‌ 17ರಂದು ಕಾರ್ಯಾದೇಶ ನೀಡಿತ್ತು. ಆದರೆ ಎರಡು ತಿಂಗಳಿಂದ ಯಾವುದೇ ಕೆಲಸ ನಡೆದಿಲ್ಲ.

‘ಮೇಲ್ಸೇತುವೆ ಕಾಮಗಾರಿಗೆ ಅಡ್ಡವಾಗಿರುವ ಮರಗಳನ್ನು ಕಡಿಯಲಾಗುತ್ತಿದೆಯೇ ಹೊರತು, ರ‍್ಯಾಂಪ್‌ ಸೇರಿದಂತೆ ಹೊಸದಾಗಿ ಪ್ರಾರಂಭ ಮಾಡಬಹುದಾದ ಕಾಮಗಾರಿಯನ್ನು ಗುತ್ತಿಗೆದಾರರು ಆರಂಭಿಸಿಲ್ಲ’ ಎಂದು ಸ್ಥಳೀಯರು ದೂರಿದರು.

‘ಕಾಮಗಾರಿಗೆ ಕಾರ್ಯಾದೇಶ ನೀಡಿದ್ದರೂ, ಒಪ್ಪಂದದಂತೆ ನೀಡಬೇಕಾದ ಮುಂಗಡ ಹಣವನ್ನು ಬಿಬಿಎಂಪಿ ಈವರೆಗೂ ಬಿಡುಗಡೆ ಮಾಡಿಲ್ಲ. ಎರಡು ತಿಂಗಳಿಂದ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಒಂದೆರಡು ಕಡೆ ರ‍್ಯಾಂಪ್‌ ಕೆಲಸ ಆರಂಭಿಸಲಾಗಿದೆ’ ಎಂದು ಗುತ್ತಿಗೆದಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT