ತಂದೆಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಆತ್ಮಹತ್ಯೆ

ಬೆಂಗಳೂರು: ವಿಜಯ ವಿಠ್ಠಲ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿ ಹರಿ ಸ್ವರಾಜ್ (19), ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೇರಳದ ಆತ, ತಿಂಗಳ ಹಿಂದಷ್ಟೇ ಕಾಲೇಜಿಗೆ ಪ್ರವೇಶ ಪಡೆದಿದ್ದ. ಮೆಕ್ಯಾನಿಕಲ್ ವಿಭಾಗದ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಹಪಾಠಿ ಜೊತೆಯಲ್ಲಿ ಕೊಠಡಿಯಲ್ಲಿ ವಾಸವಿದ್ದ.
‘ವಿದ್ಯಾರ್ಥಿಯ ಪೋಷಕರು, ಕೇರಳದಲ್ಲಿ ವಾಸವಿದ್ದಾರೆ. ಕಾಲೇಜಿಗೆ ಬಂದ ದಿನದಿಂದಲೂ ಆತ, ಪೋಷಕರ ನೆನೆದು ಕಣ್ಣೀರಿಡುತ್ತಿದ್ದ. ತರಗತಿಗೆ ಹೋಗದೇ ಹಾಸ್ಟೆಲ್ನಲ್ಲೇ ಉಳಿದುಕೊಳ್ಳುತ್ತಿದ್ದ. ‘ವಾಪಸ್ ಊರಿಗೆ ಬರುತ್ತೇನೆ’ ಎಂದು ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ. ಆದರೆ, ಅವರು ಸಮಾಧಾನ ಮಾಡುತ್ತಿದ್ದರು’ ಎಂದು ಕೊತ್ತನೂರು ಪೊಲೀಸರು ಹೇಳಿದರು.
‘ಸೋಮವಾರ ಸಂಜೆ ತಂದೆಯ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದ ಹರಿ, ‘ನನಗೆ ಇಷ್ಟವಿಲ್ಲದಿದ್ದರೂ ಎಂಜಿನಿಯರಿಂಗ್ಗೆ ಸೇರಿಸಿದ್ದೀರಿ. ಈಗ ವ್ಯಾಸಂಗ ಮಾಡುವುದು ಕಷ್ಟವಾಗುತ್ತಿದೆ. ವಾಪಸ್ ಊರಿಗೆ ಕರೆಸಿಕೊಳ್ಳಿ. ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದ. ವಾಪಸ್ ಕರೆ ಮಾಡಿದ್ದ ತಂದೆ, ‘ಆ ರೀತಿ ಯೋಚನೆ ಮಾಡಬೇಡ. ನಿನ್ನನ್ನು ವಾಪಸ್ ಕರೆದುಕೊಂಡು ಹೋಗುತ್ತೇನೆ. ಅದಕ್ಕೂ ಮುನ್ನ ಒಂದುದಿನ ಯೋಚನೆ ಮಾಡಿ ಹೇಳು’ ಎಂದು ಬುದ್ಧಿವಾದ ಹೇಳಿದ್ದರು.
‘ಅದಾದ ನಂತರ ಹರಿ ಸ್ವರಾಜ್, ಸ್ನೇಹಿತನ ಜೊತೆಯಲ್ಲಿ ಕೊಠಡಿಯಲ್ಲೇ ಇದ್ದ. ಆದರೆ, ಆ ಸ್ನೇಹಿತ ಪರಿಚಯಸ್ಥರ ಹುಟ್ಟುಹಬ್ಬದ ಪಾರ್ಟಿಗಾಗಿ ರಾತ್ರಿ ಹೊರಗಡೆ ಹೋಗಿದ್ದ. ಆಗ ತಂದೆಗೆ ಮತ್ತೊಂದು ಸಂದೇಶ ಕಳುಹಿಸಿದ್ದ ಹರಿ ಸ್ವರಾಜ್, ನಂತರವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ವಿವರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.