ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚನಾ ಫಲಕಗಳಲ್ಲಿ ಇಂಗ್ಲಿಷ್: ಆಕ್ಷೇಪ

ನೆಪಮಾತ್ರಕ್ಕೆ ಚಿಕ್ಕದಾಗಿ ಕನ್ನಡದಲ್ಲಿ ಬರೆದಿರುವ ಬಿಬಿಎಂಪಿ ನಡೆಗೆ ಕನ್ನಡ ಗೆಳೆಯರ ಬಳಗ ಖಂಡನೆ
Published 28 ಫೆಬ್ರುವರಿ 2024, 16:10 IST
Last Updated 28 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸದ ಬಿಬಿಎಂಪಿ, ಆಂಗ್ಲ ಪದಗಳಿಗೆ ಆದ್ಯತೆ ನೀಡಿದೆ ಎಂದು ಕನ್ನಡ ಗೆಳೆಯರ ಬಳಗ ಆಕ್ಷೇಪ ವ್ಯಕ್ತಪಡಿಸಿದೆ. 

ಈ ಬಗ್ಗೆ ನಗರದ ವಿವಿಧೆಡೆ ಬಳಗದ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಬಸವನಗುಡಿಯಲ್ಲಿ ‘ಬುಲ್ ಟೆಂಪಲ್ ಪಾರ್ಕ್ ರಸ್ತೆ’ ಎಂದು ಇಂಗ್ಲಿಷ್‌ ಪದಗಳನ್ನು ಕನ್ನಡದಲ್ಲಿ ಬರೆಯಲಾಗಿದೆ. ಇದೇ ರೀತಿ ವಿಶ್ವೇಶ್ವರಪುರದಲ್ಲಿ ‘ಕನ್ನಿಕಾ ಪರಮೇಶ್ವರಿ ಟೆಂಪಲ್ ರಸ್ತೆ’ ಎಂದು, ಬನಶಂಕರಿ ಮೊದಲ ಹಂತವನ್ನು ‘ಬಿಎಸ್‌ಕೆ 1ನೇ ಹಂತ’ ಎಂದು, ಜಯನಗರದ 9ನೇ ಮುಖ್ಯರಸ್ತೆಯನ್ನು ‘9ನೇ ಮೈನ್ ರಸ್ತೆ’ ಎಂದು ಸೂಚನಾ ಫಲಕ ಹಾಕಲಾಗಿದೆ. ಇದೇ ರೀತಿ ನಗರದ ವಿವಿಧೆಡೆಯ ಸೂಚನಾ ಫಲಕಗಳಲ್ಲಿ ಕನ್ನಡ, ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ತಿಲಕನಗರದಲ್ಲಿನ ಸೂಚನಾ ಫಲಕಗಳಲ್ಲಿ ಮೊದಲ ಸಾಲಿನಲ್ಲಿ ಮಾತ್ರ ಕನ್ನಡ ಇದ್ದು, ಉಳಿದ ಎಲ್ಲ ಮಾಹಿತಿ ಇಂಗ್ಲಿಷ್‌ನಲ್ಲಿದೆ. ದಂಡು ಪ್ರದೇಶದ ಕೆಲವು ರಸ್ತೆ, ವೃತ್ತದ ಫಲಕಗಳು ಇಂಗ್ಲಿಷ್‌ನಲ್ಲಿ ಮಾತ್ರ ಇವೆ ಎಂದು ಬಳಗ ತಿಳಿಸಿದೆ. 

‘ಕೇಂದ್ರ ಸರ್ಕಾರದ ಕಚೇರಿಗಳು, ರಕ್ಷಣಾ ಇಲಾಖೆಗಳ ನಾಮಫಲಕಗಳಲ್ಲಿಯೂ ಇಂಗ್ಲಿಷ್ ಪ್ರಧಾನವಾಗಿದೆ. ನಂತರ ಹಿಂದಿಗೆ ಸ್ಥಾನ ಒದಗಿಸಲಾಗಿದ್ದು, ನೆಪಮಾತ್ರಕ್ಕೆ ಸಣ್ಣದಾಗಿ ಕನ್ನಡವನ್ನು ಮೊದಲ ಸಾಲಿನಲ್ಲಿ ಬರೆಯಲಾಗಿದೆ. ಮಿಲ್ಲರ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರದ ಸಂಸ್ಥೆಗೆ ‘ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್’ ಎಂದು ಇಂಗ್ಲಿಷ್ ಹೆಸರನ್ನು ಕನ್ನಡದಲ್ಲೇ ಬರೆಯಲಾಗಿದೆ. ಅದು ಕನ್ನಡದಲ್ಲಿ ‘ಕರ್ನಾಟಕ ರಾಜ್ಯ ಮಾರುಕಟ್ಟೆ ಚಟುವಟಿಕೆ ಸಂವಹನ ಮತ್ತು ಜಾಹೀರಾತು ನಿಯಮಿತ’ ಎಂದಾಗಬೇಕಿತ್ತು. ರಾಜ್ಯ ಸರ್ಕಾರದ ಹಲವು ಸಂಸ್ಥೆಗಳ ನಾಮಫಲಕಗಳಲ್ಲೂ ಕನ್ನಡ ಸರಿಯಾಗಿ ಬಳಕೆಯಾಗಿಲ್ಲ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

‘ಬೆಂಗಳೂರಿನ ಸೂಚನಾ ಫಲಕಗಳಲ್ಲಿ ಬಹಳಷ್ಟು ವ್ಯಾಕರಣ ದೋಷಗಳಿವೆ. ಅವುಗಳನ್ನು ಸರಿಪಡಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಬೇಕು. ಈ ದೋಷವನ್ನು ತಪ್ಪಿಸಲು ಕನ್ನಡ ಬಲ್ಲ ಅಧಿಕಾರಿ ಮತ್ತು ಬರೆಯುವವರನ್ನು ನೇಮಕ ಮಾಡಬೇಕು. ರಸ್ತೆ, ಬಡಾವಣೆಗಳ ಹೆಸರನ್ನು ಕನ್ನಡ ಬಾರದವರ ಅನುಕೂಲಕ್ಕೆ ಇಂಗ್ಲಿಷ್‌ನಲ್ಲಿ ಬರೆಯಲಿ. ಆದರೆ, ಮೂಲ ಸ್ವರೂಪವನ್ನು ಇಂಗ್ಲಿಷ್‌ಗೆ ಅನುವಾದ ಮಾಡಬಾರದು. ಅಂದರೆ, ‘ದೊಡ್ಡ ಬಸವಣ್ಣ ರಸ್ತೆ’ಯು ಇಂಗ್ಲಿಷ್‌ನಲ್ಲಿ ‘ಬುಲ್‌ ಟೆಂಪಲ್ ರಸ್ತೆ’ ಆಗಬಾರದು. ಹೆಸರುಗಳನ್ನು ಯಾವ ಭಾಷೆಯಲ್ಲೇ ಬರೆದರೂ ಮೂಲ ಹೆಸರನ್ನೇ ಉಳಿಸಿಕೊಳ್ಳಬೇಕು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT