ಮಂಗಳವಾರ, ನವೆಂಬರ್ 12, 2019
28 °C
ಪಶ್ಚಿಮ ಘಟ್ಟ ಸಂರಕ್ಷಣೆ ವರದಿ: ಅಪಪ್ರಚಾರ ಮಾಡಿದವರೂ ಈಗ ಒಪ್ಪಿದ್ದಾರೆ: ಗಾಡ್ಗೀಳ್‌

‘ಪರಿಸರ ಸಂರಕ್ಷಣೆ: ಜನರ ಕೈಗೆ ಅಧಿಕಾರ ನೀಡಿ’

Published:
Updated:
Prajavani

ಬೆಂಗಳೂರು: ‘ಹವಾಮಾನ ವೈಪರೀತ್ಯಗಳಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಅಧಿಕಾರಶಾಹಿಯನ್ನು ನೆಚ್ಚಿಕೊಳ್ಳುವ ಬದಲು ಜನರ ಕೈಗೆ ಹೆಚ್ಚಿನ ಅಧಿಕಾರ ನೀಡುವುದು ಒಳ್ಳೆಯದು. ಅವರಿಂದ ಪರಿಸರ ಸಂರಕ್ಷಣೆ ಚೆನ್ನಾಗಿ ಆಗುತ್ತದೆ ಎಂಬ ಆಶಾವಾದ ನನಗಿದೆ’ ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಸಿರು ವ್ಯಥೆ–ಹವಾಮಾನ ವೈಪರೀತ್ಯದ ಆಚೆ’ ಸಂವಾದದಲ್ಲಿ ಅವರು ಮಾತನಾಡಿದರು.

‘ಪಶ್ಚಿಮಘಟ್ಟದ ಅನೇಕ ಪರಿಸರ ಸೂಕ್ಷ್ಮ ಪ್ರದೇಶಗಳು ಹೆಚ್ಚು ಹಾನಿಗೊಳಗಾಗುತ್ತಿದೆ. ಇದನ್ನು ತಡೆಯಲು ‌ಕಠಿಣ ಕ್ರಮಗಳ ಅಗತ್ಯವಿದೆ. ಈ ಪ್ರಕ್ರಿಯೆ ಸರ್ಕಾರದ ಮೇಲ್ಮಟ್ಟದಿಂದ ತಳಮಟ್ಟಕ್ಕೆ ಬರುವಂತಾಗಬಾರದು. ಏನೆಲ್ಲ ಸಂರಕ್ಷಣೆ ಮಾಡಬೇಕು. ಪರಿಸರಸ್ನೇಹಿಯಾದ ಯಾವ ಚಟುವಟಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ತಳಮಟ್ಟದ ಜನರ ಅಭಿಪ್ರಾಯ ಪಡೆದು ಪ್ರಜಾಸತ್ತಾತ್ಮಕ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ನಿರ್ಬಂಧ ವಿಧಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಿದರೆ, ಅದು ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ಮಹಾರಾಷ್ಟ್ರದಲ್ಲಿ ಪಶ್ಚಿಮಘಟ್ಟದ ಅಂಚಿನ ಗ್ರಾಮವೊಂದರಲ್ಲಿ ಹಿಂದೆಯೂ ಬಾವಿ ತೋಡಬಹುದಿತ್ತು. ಈಗಲೂ ಬಾವಿ ತೋಡಬಹುದು. ಆದರೆ, ಈಗ 25 ಸಾವಿರ ಲಂಚ ಕೊಡಬೇಕು ಅಷ್ಟೇ’ ಎಂದು ವಸ್ತುಸ್ಥಿತಿ ಬಿಚ್ಚಿಟ್ಟರು.

‘ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ 1,100 ಗ್ರಾಮಗಳಲ್ಲಿ 3 ಲಕ್ಷ ಹೆಕ್ಟೇರ್‌ನಲ್ಲಿ  ಸಮುದಾಯ ಅರಣ್ಯ ಬೆಳೆಸಲು ನೀಡಲಾಗಿದೆ. ಈಗ ಅಲ್ಲಿ ಪರಿಸರ ಸೇವೆಗಳು ಲಭ್ಯ. ನಾನೂ ಅನೇಕ ವರ್ಷಗಳಿಂದ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದೇನೆ. ಅವರು ಸುಸ್ಥಿರವಾಗಿ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ. ಅವರು ನೈಸರ್ಗಿಕ ಸಂಪನ್ಮೂಲ ಕಾಪಾಡುತ್ತಿದ್ದಾರೆ. ದೂರಸಂವೇದಿ ಅಧ್ಯಯನದ ಪ್ರಕಾರ, ಈ ಪ್ರದೇಶದಲ್ಲಿ ಹಸಿರಿನ ಪ್ರಮಾಣ ಹೆಚ್ಚಳವಾಗಿದ್ದು, ಕಾರ್ಬನ್‌ ಡಯಾಕ್ಸೈಡ್‌ ಪ್ರಮಾಣ ಕಡಿಮೆ ಆಗಿದೆ’ ಎಂದರು.

‘ಎರಡು ತಿಂಗಳ ಹಿಂದೆ ನಾನು ಕೇರಳದ ವಯನಾಡು ಜಿಲ್ಲೆಯ ಪುಟುಮಲೆಗೆ ಭೇಟಿ ನೀಡಿದ್ದೆ. ಭಾರಿ ಭೂಕುಸಿತ ಅಲ್ಲಿನ 50 ಮನೆಗಳನ್ನು ಮುಚ್ಚಿಹಾಕಿದೆ. 15 ಮಂದಿಯ ಬಲಿ ಪಡೆದಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಎಂದು ನಾನು ಗುರುತಿಸಿದ್ದ ಪ್ರದೇಶದಲ್ಲೇ ಈ ಅವಘಡ ಸಂಭವಿಸಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆಗಳು, ರೆಸಾರ್ಟ್‌ಗಳು ತಲೆ ಎತ್ತಿವೆ. ಗಣಿಗಾರಿಕೆ ಅವ್ಯಾಹತವಾಗಿದೆ. ಅಸಂತುಲಿತ ಅಭಿವೃದ್ಧಿ ಚಟುವಟಿಕೆಗಳೇ ಅವಘಡಕ್ಕೆ ಕಾರಣ’ ಎಂದು ಸ್ಪಷ್ಟಪಡಿಸಿದರು.

‘ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಬೇಕಾದ ಅಗತ್ಯದ ಬಗ್ಗೆ ನನ್ನ ನೇತೃತ್ವದ ಸಮಿತಿ ವರದಿ ನೀಡಿತ್ತು. ನನ್ನ ಸಮಿತಿಯ ವರದಿಯನ್ನು ಜನವಿರೋಧಿ, ಪ್ರಗತಿ ವಿರೋಧಿ ಎಂದೆಲ್ಲ ಟೀಕಿಸಲಾಯಿತು. ಅಭಿವೃದ್ಧಿ ಬಗ್ಗೆ ಸಂಕುಚಿತ ಮನೋಭಾವ ಸರಿಯಲ್ಲ. ಜನರ ಏಳಿಗೆಗೆ ನಿಸರ್ಗದ ಸಂಪತ್ತನ್ನು ಬಳಸಬೇಕು’ ಎಂದರು.

‘ವರದಿ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡಿದರು. ಕೇರಳದಲ್ಲಿ ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಮತ್ತು ಭೂ ಕುಸಿತ ಕಾಣಿಸಿಕೊಂಡಾಗ ಅಲ್ಲಿನ ಸರ್ಕಾರ, ‘ಇದು ಸಹಜ ಪ್ರಕ್ರಿಯೆ. 1924ರಲ್ಲೂ ಹೀಗೆಯೇ ಆಗಿತ್ತು. 100 ವರ್ಷಕ್ಕೊಮ್ಮೆ ಇಂತಹವು ಸಂಭವಿಸುತ್ತದೆ’ ಎಂದು ಪ್ರತಿಪಾದಿಸಿತು. ಈ ವರ್ಷ ಮತ್ತೆ ಭೂಕುಸಿತ ಮರುಕಳಿಸಿದಾಗ ಎಲ್ಲೋ ಲೋಪ ಆಗಿದೆ ಎಂಬುದು ಜನರಿಗೂ ಮನದಟ್ಟಾಗಿದೆ. ಈಗ ಕೇರಳದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳೂ ನನ್ನ ಸಮಿತಿಯ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಿದ್ದಾರೆ’ ಎಂದರು.

ಆಸ್ಟ್ರೇಲಿಯಾ ಲೇಖಕ ಟಿಮ್‌ ಫ್ಲಾನರಿ, ‘ಆಸ್ಟ್ರೇಲಿಯಾ ಹಾಗೂ ಭಾರತದ ಸ್ಥಿತಿ ವಿಭಿನ್ನವಾಗಿಲ್ಲ. ಅರಣ್ಯ ನಾಶದಿಂದ ಅಕ್ರಮ ಗಣಿಗಾರಿಕೆಯಿಂದ ಹವಾಮಾನ ಸಮಸ್ಯೆ ಹೆಚ್ಚಾಗಿದೆ. ನಾವು ಪೆಟ್ರೋಲ್‌ ಕಲ್ಲಿದ್ದಲು ಹಾಗೂ ಅರಣ್ಯ ಸುಡುವುದನ್ನು ನಿಲ್ಲಿಸಬೇಕು. ಸ್ವಚ್ಛ ಅಭಿವೃದ್ಧಿ ಪಥವನ್ನು ಅನುಸರಿಸುವುದು ಉತ್ತಮ’ ಎಂದರು.

ಪ್ರತಿಕ್ರಿಯಿಸಿ (+)