ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷ ಮೇಲ್ಪಟ್ಟವರಿಗೆ ಉಚಿತ ಬಸ್‌ ಪ್ರಯಾಣ: ರವಿಕಾಂತೇಗೌಡ ಸಲಹೆ

Last Updated 28 ಆಗಸ್ಟ್ 2020, 21:11 IST
ಅಕ್ಷರ ಗಾತ್ರ

ಬೆಂಗಳೂರು: 'ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ಬಳಸಬೇಕಾದರೆ ಬಸ್ ವ್ಯವಸ್ಥೆ ಆಧುನೀಕರಣಗೊಳ್ಳಬೇಕು. ಪ್ರಯಾಣಿಕರಲ್ಲಿ ಬಸ್ ಸಂಚಾರದ ಬಗ್ಗೆ ವಿಶ್ವಾಸಾರ್ಹತೆ ಮೂಡಬೇಕು' ಎಂದು ಜಂಟಿಪೊಲೀಸ್ ಕಮಿಷನರ್‌ (ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ಎನ್ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್ ಟ್ರಸ್ಟ್ (ಇಎಸ್‍ಜಿ) ಸಹಯೋಗದಲ್ಲಿ 'ಸಂಚಾರ ದಟ್ಟಣೆಯ ಸುವ್ಯವಸ್ಥೆ ಹಾಗೂ ಶಾಂತಗೊಳಿಸುವಿಕೆ' ಕುರಿತು ಶುಕ್ರವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

'ಯಾವುದೇ ದೇಶದ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಲಾಭದ ದೃಷ್ಟಿಯಿಂದ ನಡೆಯುತ್ತಿಲ್ಲ. ಈ ವಿಚಾರದಲ್ಲಿ ನಗರ ಸಾರಿಗೆ ಅಭಿವೃದ್ಧಿಯಾಗಬೇಕಿದೆ. ಸಾರ್ವಜನಿಕರಿಗಾಗಿ ಬಸ್ ದರ ಕಡಿಮೆ ಮಾಡುವುದರ ಜೊತೆಗೆ 18 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು' ಎಂದರು.

'ಖಾಸಗಿ ವಾಹನಗಳ ಅನಗತ್ಯ ಸಂಚಾರ ತಡೆಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಬೇಕು. ನಗರದಲ್ಲಿ ಸಂಚರಿಸುತ್ತಿರುವ ಬಸ್‍ಗಳು ಉದ್ದವಾಗಿದ್ದು, ಇಲ್ಲಿನ ರಸ್ತೆಗಳಿಗೆ ಹೋಲುವಂತಹ ಬಸ್‍ಗಳ ವಿನ್ಯಾಸಕ್ಕೆ ಮುಂದಾಗಬೇಕು. ಇದರಿಂದ ಪ್ರಯಾಣಿಕರ ಸಮೀಪಕ್ಕೆ ಬಸ್‍ಗಳು ತಲುಪಬಹುದು' ಎಂದು ಸಲಹೆ ನೀಡಿದರು.

ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ, 'ನಗರದಲ್ಲಿ ಬಿಎಂಟಿಸಿಯನ್ನು ಜನರು ಪ್ರಾಥಮಿಕ ಹಂತದ ಸಾರಿಗೆಯಾಗಿ ಅವಲಂಬಿಸಿದ್ದಾರೆ. ಒಂದೇ ಮಾರ್ಗದಲ್ಲಿ ಮೆಟ್ರೊ ಹಾಗೂ ಬಿಎಂಟಿಸಿ ಸಂಚರಿಸುವ ಬದಲಿಗೆ, ಮೆಟ್ರೊ ಸಂಪರ್ಕವಿಲ್ಲದ ಸ್ಥಳಗಳಿಗೆ ಬಸ್ ಸೇವೆ ಹೆಚ್ಚಾಗಬೇಕು. ಬಸ್‍ಗಳ ಸಂಚಾರಕ್ಕೆ ರಸ್ತೆಯಲ್ಲಿ ಹೆಚ್ಚಿನ ಜಾಗ ಸಿಗಬೇಕು' ಎಂದರು.

ಕಾಂಗ್ರೆಸ್‌ ಮುಖಂಡ ಪ್ರೊ.ರಾಜೀವ್ ಗೌಡ, 'ದಟ್ಟಣೆ ತಗ್ಗಲು ನಗರದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣಗಳು ತಲೆ ಎತ್ತಬೇಕಿವೆ. ಮುಂಬರುವ ಬಸ್‍ನ ಮಾಹಿತಿ ಪ್ರಯಾಣಿಕನಿಗೆ ಸುಲಭವಾಗಿ ಸಿಗಬೇಕು ಹಾಗೂ ನಿರ್ಧರಿಸುವ ಸಾಮರ್ಥ್ಯ ಹೆಚ್ಚಬೇಕು. ನಗರದ ದಟ್ಟಣೆ ಪೀಡಿತ ಸ್ಥಳಗಳಲ್ಲಿ 'ಆದ್ಯತಾ ಪಥ'ಗಳು ಹೆಚ್ಚಾಗಬೇಕಿವೆ'ಎಂದು ತಿಳಿಸಿದರು.

ಶಾಸಕ ಉದಯ್ ಬಿ.ಗರುಡಾಚಾರ್, 'ಪ್ರತಿದಿನ ಹೊಸ ಯೋಜನೆಗಳು ಆರಂಭವಾಗುತ್ತಿವೆ. ಮರ ಕಡಿಯಲುಇದು ಎಡೆಮಾಡಿಕೊಡುತ್ತಿವೆ. ಜೆ.ಸಿ.ರಸ್ತೆ, ಅವೆನ್ಯೂ ರಸ್ತೆಯಂತಹ ವಾಣಿಜ್ಯ ಪ್ರದೇಶಗಳಲ್ಲಿ ದಟ್ಟಣೆ ಅಧಿಕವಾಗಿದ್ದು, ಇಂತಹ ಸ್ಥಳಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT