ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಮೇಲ್ಸೇತುವೆ: ಸಂಚಾರ ನಿತ್ಯ ಗೋಳು

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ lದಟ್ಟಣೆಗೆ ಸಿಗದ ಪರಿಹಾರ
Last Updated 17 ಡಿಸೆಂಬರ್ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ರಸ್ತೆಯ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿತ್ಯವೂ ಸಂಚಾರ ದಟ್ಟಣೆಯ ಗೋಳು ಸಾಮಾನ್ಯವಾಗಿಬಿಟ್ಟಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನಂಪ್ರತಿ ವಾಹನಗಳು ದಟ್ಟಣೆಯಲ್ಲಿ ಸಿಲುಕಿ ಸಾಲುಗಟ್ಟಿ ನಿಲ್ಲುತ್ತಿವೆ. ಈ ಮೇಲ್ಸೇತುವೆ ಬಳಸುವವರು ನಿಮಿಷಗಟ್ಟಲೇ ಕಾಯುವ ಶಿಕ್ಷೆಯನ್ನು ಅನುಭವಿಸುವಂತಾಗಿದೆ.

ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಬಹುತೇಕ ಪ್ರಯಾಣಿಕರು ಬಳ್ಳಾರಿ ರಸ್ತೆ ಮೂಲಕವೇ ಬೆಂಗಳೂರು ಪ್ರವೇಶಿಸುತ್ತಾರೆ. ವಿಮಾನ ನಿಲ್ದಾಣದಿಂದ ಹೊರಟು ಯಾವುದೇ ಅಡೆತಡೆಗಳಿಲ್ಲದೆಯೇ ಬರುವ ಅವರು, ಹೆಬ್ಬಾಳ ಸೇತುವೆ ಬಳಿ ಬರುತ್ತಿದ್ದಂತೆಯೇ ಧುತ್ತೆಂದು ಎದುರಾಗುವ ದಟ್ಟಣೆಗೆ ಬೆಚ್ಚಿ ಬೀಳುವ ಸ್ಥಿತಿ ಇದೆ. ಎರಡು ಪಥಗಳ ರಸ್ತೆಯಲ್ಲಿ ಬಂದ ವಾಹನಗಳು, ಇಲ್ಲಿ ಮೇಲ್ಸೇತುವೆಯಲ್ಲಿ ಒಂದೇ ಪಥದಲ್ಲಿ ಸಾಗಬೇಕಿದೆ. ದಟ್ಟಣೆಗೆ ಇದುವೇ ಪ್ರಮುಖ ಕಾರಣವೆಂದು ಸ್ಥಳೀಯರು ದೂರುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.

‘ಹೆಬ್ಬಾಳ ಮೇಲ್ಸೇತುವೆ ಮೂಲಕ ಬನ್ನಿ ಎಂದೊಡನೆ, ಅದರ ಸಹವಾಸ ಬೇಡವೆಂದು ಸಂಬಂಧಿಕರು ಹೇಳುತ್ತಾರೆ. ಹೆಬ್ಬಾಳ ಮೇಲ್ಸೇತುವೆ ಅತೀ ಹೆಚ್ಚು ದಟ್ಟಣೆ ಇರುವ ಜಾಗವೆಂಬ ಅಪಖ್ಯಾತಿಗೂ ಪಾತ್ರವಾಗಿದೆ. ಈ ಸಮಸ್ಯೆಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ’ ಎಂದು ಸ್ಥಳೀಯ ನಿವಾಸಿ ಎಸ್‌. ವೀರೇಶ್ ಅಳಲು ತೋಡಿಕೊಂಡರು.

‘ವಿಮಾನ ನಿಲ್ದಾಣದಿಂದ ವೇಗವಾಗಿ ಬರುವ ವಾಹನಗಳು, ಹೆಬ್ಬಾಳ ಮೇಲ್ಸೇತುವೆಯಲ್ಲಿ ದಟ್ಟಣೆಯಲ್ಲಿ ಸಿಲುಕುತ್ತವೆ. ಮಧ್ಯಾಹ್ನ ದಟ್ಟಣೆ ಪ್ರಮಾಣ ಸ್ವಲ್ಪ ಕಡಿಮೆ. ಬೆಳಿಗ್ಗೆ ಹಾಗೂ ಸಂಜೆಯಂತೂ ವಾಹನಗಳುಕಿ.ಮೀ ಗಟ್ಟಲೇ ಸಾಲುಗಟ್ಟಿ ನಿಂತಿರುತ್ತವೆ. ಇಂಥ ದಟ್ಟಣೆಯ ಅವಧಿಯಲ್ಲಿ ಮೇಲ್ಸೇತುವೆ ಮೂಲಕ ವಾಹನಗಳು ಹಾದುಹೋಗಲು ಅರ್ಧ ತಾಸುಗಟ್ಟಲೆ ಸಮಯ ತಗಲುತ್ತದೆ’ ಎಂದು ವಿವರಿಸಿದರು.

ಸಂಜಯನಗರದ ರಾಮಕೃಷ್ಣ ಲೇಔಟ್ ನಿವಾಸಿ ದೀಪಕ್‌ಕುಮಾರ್, ‘ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವುದೇ ದೊಡ್ಡ ತಲೆನೋವು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತೇನೆ. ಕೆಲಸದ ಅವಧಿಗೂ ಎರಡು ಗಂಟೆ ಮುನ್ನವೇ ಮನೆಯಿಂದ ಬೆಳಿಗ್ಗೆ ಹೊರಡುತ್ತೇನೆ. ಸಂಜೆ ಕೆಲಸ ಮುಗಿಸಿ ಹೊರಡುವಾಗ ಮನೆಗೆ ಯಾವಾಗ ಹೋಗುತ್ತೇನೆ ಎಂಬ ಬಗ್ಗೆಯೇ ಸ್ಪಷ್ಟತೆ ಇರುವುದಿಲ್ಲ’ ಎಂದರು.

‘ಸಂಜೆ ಮನೆಗೆ ಹೊರಡುವಾಗ ಹೆಬ್ಬಾಳ ಮೇಲ್ಸೇತುವೆಯನ್ನು ದಾಟಿ ಮುಂದೆ ಸಾಗಿದರೆ ಸಾಕು ಅನಿಸುತ್ತದೆ. ಆದರೆ, ವಾಹನಗಳ ದಟ್ಟಣೆ ಇದ್ದೇ ಇರುತ್ತದೆ. ಮೇಲ್ಸೆತುವೆ ದಾಟಿದ ಕೂಡಲೇ ಏನೋ ಸಾಧನೆ ಮಾಡಿದಷ್ಟು ಖುಷಿ ಆಗುತ್ತದೆ’ ಎಂದೂವ್ಯಂಗ್ಯವಾಡಿದರು.

ಮಾಲ್‌, ಖಾಸಗಿ ಕಂಪನಿಗಳ ತಾಣ: ಎಸ್ಟಿಮ್ ಮಾಲ್‌ ಹಾಗೂ ಹಲವು ಖಾಸಗಿ ಕಂಪನಿಗಳು ಈ ರಸ್ತೆಯ ಆಸುಪಾಸಿನಲ್ಲಿವೆ. ನಗರದ ವಸತಿ ಪ್ರದೇಶಗಳಿಂದ ಕೆಲಸಕ್ಕೆ ಹೋಗುವ ಹಾಗೂ ಕೆಲಸ ಮುಗಿಸಿ ಮನೆಗೆ ಮರಳುವ ಬಹುತೇಕರು ಹೆಬ್ಬಾಳ ಮೇಲ್ಸೇತುವೆ ಬಳಸುತ್ತಾರೆ. ನಿತ್ಯವೂ ಇಲ್ಲಿನ ಸಂಚಾರ ದಟ್ಟಣೆಯಿಂದ ಬೇಸತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಯಾವಾಗ ಎಂಬುದಾಗಿ ಇವರೆಲ್ಲರೂ ಪ್ರಶ್ನಿಸುತ್ತಿದ್ದಾರೆ.

ಹೆಬ್ಬಾಳ ಕೆರೆಗೆ ಹೊಂದಿಕೊಂಡಿರುವ ಮೇಲ್ಸೇತುವೆ ಕೆಳಭಾಗದಲ್ಲಿ ರೈಲ್ವೆ ಹಳಿ ಇದೆ. ಮೇಲ್ಸೇತುವೆ ತಪ್ಪಿಸಿ, ಸರ್ವೀಸ್ ರಸ್ತೆ ಮೂಲಕ ಹೊರ ವರ್ತುಲ ರಸ್ತೆಗೆ ಸೇರಿ ಮುಂದಕ್ಕೆ ಹೋಗಲು ಅಡೆತಡೆಗಳಿವೆ. ಸುತ್ತಿ– ಬಳಸಿ ಸಂಚರಿಸಬೇಕಾದ ಸ್ಥಿತಿಯೂ ಇದೆ.

‘ದಿನದಲ್ಲಿ ಒಂದು ಬಾರಿ ದಟ್ಟಣೆ ಸಹಿಸಿಕೊಳ್ಳಬಹುದು. ಅದೇ ನಿತ್ಯವೂ ದಟ್ಟಣೆಯಾದರೆ ಕಿರಿಕಿರಿ ಹೆಚ್ಚು. ಕೆಲಸ ಹಾಗೂ ಇತರೆ ಒತ್ತಡಗಳಲ್ಲಿರುವ ಜನ, ದಟ್ಟಣೆಯಲ್ಲಿ ಸಿಲುಕಿದರಂತೂ ಅವರ ಪಾಡು ಹೇಳತೀರದು’ ಎಂದು ಖಾಸಗಿ ಕಂಪನಿ ಉದ್ಯೋಗಿಯೂ ಆಗಿರುವ ಬೈಕ್ ಸವಾರ ಅರುಣ್‌ ಗೌಡ ಸಮಸ್ಯೆ ಹೇಳಿಕೊಂಡರು.

ಕ್ಯಾಬ್ ಚಾಲಕ ನಾರಾಯಣಸ್ವಾಮಿ, ‘ವಿಮಾನ ನಿಲ್ದಾಣದಿಂದ ನಗರಕ್ಕೆ ಕ್ಯಾಬ್ ಸೇವೆ ನೀಡುತ್ತಿದ್ದೇನೆ. ಸಾಮಾನ್ಯ ದಿನಗಳಲ್ಲಿ ಹೆಬ್ಬಾಳ ಮೇಲ್ಸೇತುವೆ ದಾಟಲು 15 ನಿಮಿಷ ಬೇಕು. ದಟ್ಟಣೆ ಸಮಯದಲ್ಲಂತೂ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಯಲೇ ಬೇಕು’ ಎಂದರು.

‘ದಟ್ಟಣೆ ಸಮಸ್ಯೆಯಿಂದ ಹೆಚ್ಚು ಟ್ರಿಪ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ತಿಂಗಳ ದುಡಿಮೆಯೂ ಕಡಿಮೆ ಆಗುತ್ತಿದ್ದು, ಕಾರಿನ ಕಂತು ತುಂಬಲು ಕಷ್ಟಗಳು ಎದುರಾಗುತ್ತಿವೆ’ ಎಂದು ಅಳಲು ತೋಡಿಕೊಂಡರು.

‘ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಬ್ಬಾಳ ಮೇಲ್ಸೇತುವೆ ಮಾತ್ರ ಹಾಗೇ ಇದೆ. ದಯವಿಟ್ಟು ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ’ ಎಂದೂ ಅವರು ಎಚ್ಚರಿಕೆ ಮಾತುಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT