ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸಿಎಚ್‌ಎಸ್‌ಗೆ ಹೈಕೋರ್ಟ್‌ ತಪರಾಕಿ

₹50 ಸಾವಿರ ದಂಡ, ‘ತಬರನ ಕಥೆ’ಯಾದ ನಿವೃತ್ತ ಸ್ಕ್ವಾಡ್ರನ್‌ ಲೀಡರ್ ಅವಸ್ಥೆ
Last Updated 26 ಜುಲೈ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಎರಡು ಯುದ್ಧಗಳಲ್ಲಿ ಹೋರಾಡಿ ಸ್ವಯಂ ನಿವೃತ್ತಿ ಪಡೆದು ನಗರದಲ್ಲಿ ನೆಲೆಸಿರುವ ಸ್ಕ್ವಾಡ್ರನ್‌ ಲೀಡರ್‌ ಆರ್‌.ವಿ.ನಾಥನ್‌ ಅವರ ಪತ್ನಿಯ ವೈದ್ಯಕೀಯ ವೆಚ್ಚ ಪಾವತಿಸಲು ಹನ್ನೊಂದು ವರ್ಷ ವೃಥಾ ಅಲೆದಾಡಿಸಿದ ಆರೋಪದ ಮೇರೆಗೆ ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆ (ಇಸಿಎಚ್‌ಎಸ್‌) ಅಧಿಕಾರಿಗೆ ಹೈಕೋರ್ಟ್‌ ₹ 50 ಸಾವಿರ ದಂಡ ವಿಧಿಸಿದೆ.

ಈ ಕುರಿತಂತೆ ನಾಥನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ದಂಡದ ಮೊತ್ತವನ್ನು ನವದೆಹಲಿಯಲ್ಲಿರುವ ಇಸಿಎಚ್ಎಸ್ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರ ಸಂಬಳದಲ್ಲಿ ಕಡಿತಗೊಳಿಸಬೇಕು. ಅಂತೆಯೇ ವೆಚ್ಚದ ಮರುಪಾವತಿಯ ಒಟ್ಟು ಮೊತ್ತ ₹4,10,260 ಅನ್ನು 2008ರಿಂದ ಈವರೆವಿಗೆ ಶೇ 9ರ ವಾರ್ಷಿಕ ಬಡ್ಡಿ ದರದಲ್ಲಿ ಅರ್ಜಿದಾರರಿಗೆ ಪಾವತಿಸಬೇಕು’ ಎಂದು ಆದೇಶಿಸಿದೆ.

‘ಕೋರ್ಟ್‌ನ ಈ ಆದೇಶದ ಪ್ರತಿ ತಲುಪಿದ ಆರು ವಾರಗಳಲ್ಲಿ ಮೊತ್ತವನ್ನು ಪಾವತಿಸಬೇಕು. ತಪ್ಪಿದಲ್ಲಿ ಅರ್ಜಿದಾರರು, ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಸ್ವತಂತ್ರರಾಗಿರುತ್ತಾರೆ’ ಎಂದೂ ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಆರ್.ವಿ.ನಾಥನ್‌ ಅವರ ಪತ್ನಿ 2000ನೇ ಇಸ್ವಿಯಲ್ಲಿ ಅನಾರೋಗ್ಯದ ಕಾರಣ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೆಚ್ಚವಾಗಿದ್ದ ₹1.20 ಲಕ್ಷ ಮೊತ್ತದಲ್ಲಿ ₹54,900 ಅನ್ನು ಇಸಿಎಚ್ಎಸ್‌ ಪಾವತಿ ಮಾಡಿತ್ತು. ಪುನಃ 2007ರಲ್ಲಿ ಆಸ್ಪತ್ರೆಗೆ ದಾಖಲಾದ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಕೆಲದಿನಗಳ ನಂತರ ಕೊನೆಯುಸಿರೆಳೆದಿದ್ದರು.

ಆಸ್ಪತ್ರೆಯ ಖರ್ಚು ಒಟ್ಟು ₹6.30 ಲಕ್ಷವನ್ನು ಮರು ಪಾವತಿ ಮಾಡುವಂತೆ ನಾಥನ್‌ ಇಸಿಎಚ್ಎಸ್‌ಗೆ ಕೋರಿದ್ದರು. ಆದರೆ ಇಸಿಎಚ್‌ಎಸ್ ₹1.25 ಲಕ್ಷವಷ್ಟೇ ಪಾವತಿಸಿತ್ತು. ಉಳಿದ ಮೊತ್ತದ ಬೇಡಿಕೆಯನ್ನು ತಿರಸ್ಕರಿಸಿತ್ತು. ಈ ಕ್ರಮವನ್ನು ನಾಥನ್‌ ಸಶಸ್ತ್ರಪಡೆಯ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದರು.

ವೆಚ್ಚದ ಬಾಕಿ ಪಾವತಿಸುವಂತೆ ನ್ಯಾಯಮಂಡಳಿ ನೀಡಿದ ಆದೇಶವನ್ನು ಇಸಿಎಚ್ಎಸ್‌ ಪಾಲಿಸಿರಲಿಲ್ಲ. ಇದರಿಂದಾಗಿ ನಾಥನ್‌ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಅರ್ಜಿದಾರರ ಮನವಿ ಪರಿಗಣಿಸುವಂತೆ ನಿರ್ದೇಶಿಸಿದ್ದರೂ ಅದನ್ನೂ ಇಸಿಎಚ್‌ಎಸ್ ಪಾಲಿಸಿರಲಿಲ್ಲ. ಇದರಿಂದಾಗಿ ಅವರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

1963ರಲ್ಲಿ ತರಬೇತಿ ಅಧಿಕಾರಿಯಾಗಿ ಭಾರತೀಯ ವಾಯುಸೇನೆ ಸೇರ್ಪಡೆಯಾಗಿದ್ದ ನಾಥನ್‌, 1965 ಮತ್ತು 1971ರ ಭಾರತ–ಪಾಕ್ ನಡುವಿನ ಯುದ್ಧದಲ್ಲಿ ಹೋರಾಡಿದ್ದರು. 1986ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.

‘ಪರದಾಡುವಂತೆ ಮಾಡಿದ್ದು ದುರದೃಷ್ಟಕರ’

‘ಹೊರಗಿನ ಶತ್ರುಗಳಿಂದ ತಾಯ್ನೆಲದ ರಕ್ಷಣೆಗಾಗಿ ಭಾರತೀಯ ಸೇನೆ, ನೌಕಾ ಮತ್ತು ವಾಯಪಡೆಗಳ ಯೋಧರ ಸೇವೆ ಬಣ್ಣಿಸಲಸದಳ’ ಎಂದುನ್ಯಾಯಪೀಠ ಹೇಳಿದೆ.

‘ಇವರಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಿದರೂ ಇಸಿಎಚ್ಎಸ್‌, ಒಬ್ಬ ನಿವೃತ್ತ ಸ್ಕ್ವಾಡ್ರನ್‌ ಲೀಡರ್‌ ಪತ್ನಿಯ ಆಸ್ಪತ್ರೆ ಖರ್ಚು ಪಾವತಿಗೆ ದಶಕಗಳ ಕಾಲ ಪರದಾಡುವಂತೆ ಮಾಡಿದ್ದು ದುರದೃಷ್ಟಕರ‘ ಎಂದು ಆದೇಶದಲ್ಲಿ ವಿವರಿಸಲಾಗಿದೆ.

**

ಯೋಧರ ಬದುಕು ಗುಲಾಬಿಗಳ ಹಾಸಿಗೆಯ ಮೇಲೆ ಮಲಗಿದಂತಲ್ಲ. ಅಕ್ಷರಶಃ ಅದೊಂದು ಮುಳ್ಳಿನ ಹಾಸಿಗೆ. ಅವರ ಅನುಪಮ ಕರ್ತವ್ಯಕ್ಕೆ ಬೆಲೆ ಕಟ್ಟಲಾಗದು.

-ಬಿ.ವೀರಪ್ಪ,ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT