ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ, ಪೊಲೀಸರಿಂದ ಕಿರುಕುಳ: ಮಾಜಿ ಉಪ ಮೇಯರ್ ಆತ್ಮಹತ್ಯೆಗೆ ಯತ್ನ

Last Updated 14 ಆಗಸ್ಟ್ 2022, 1:56 IST
ಅಕ್ಷರ ಗಾತ್ರ

ಬೆಂಗಳೂರು: ‘ಪತಿ ಅನ್ವರ್ ಪಾಷಾ ಹಾಗೂ ಕೆ.ಆರ್. ಪುರ ಠಾಣೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಮಾಜಿ ಉಪ ಮೇಯರ್ ಶಹತಾಜ್ ಬೇಗಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಡಿಯೊ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕುತ್ತಿಗೆಗೆ ಸೀರೆಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ಶಹತಾಜ್, ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮೋದಿ ಅವರೇ ಅನುಮತಿ ಕೊಡಿ. ಇಲ್ಲ, ನನಗೆ ರಕ್ಷಣೆ ಕೊಡಿ’ ಎಂದು ಹೇಳಿದ್ದಾರೆ.

‘ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿದ್ದೇನೆ. ಸಂಬಂಧಿಕರೇ ಆದ ಅನ್ವರ್ ಪಾಷಾ ಜೊತೆ ನನ್ನ ಮದುವೆ ಮಾಡಿದ್ದರು. ಮದ್ಯ ವ್ಯಸನಿಯೂ ಆದ ಪತಿ, ಹಲವು ಯುವತಿಯರ ಜೊತೆ ಸಂಬಂಧವಿಟ್ಟುಕೊಂಡಿದ್ದಾರೆ. ಆಸ್ತಿ ಮೇಲೂ ಸಾಲ ಮಾಡಿ, ಬ್ಯಾಂಕ್‌ನಿಂದ ನೋಟಿಸ್ ಕೊಡಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. 2011ರಲ್ಲಿ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿ ತಲಾಖ್ ನೀಡಿದ್ದರು.’

‘ತಲಾಖ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೆ. ನನ್ನ ಪರ ತೀರ್ಪು ಬಂದಿತ್ತು. ಇಷ್ಟಾದರೂ ಪತಿಯ ಕಿರುಕುಳ ತಪ್ಪಿಲ್ಲ. ಕೆ.ಆರ್.ಪುರ ಠಾಣೆಗೆ ದೂರು ನೀಡಿದರೆ, ರಕ್ಷಣೆ ನೀಡಲು ಇನ್‌ಸ್ಪೆಕ್ಟರ್ ನಂದೀಶ್ ಹಣ ಕೇಳಿದರು. ಜೊತೆಗೆ ಠಾಣೆಯ ಪಿಎಸ್ಐ ಅನಿತಾ, ‘ನೀನು ಮಾಜಿ ಮಾತ್ರ. ಹೆಚ್ಚು ಮಾತನಾಡಬೇಡ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮದ್ಯ ಕುಡಿದು ಮನೆಗೆ ಬಂದಿದ್ದ ಕೆಲ ಪೊಲೀಸರು, ಸಂಬಂಧಿಕರ ಮೇಲೆ ಹಲ್ಲೆ ಸಹ ಮಾಡಿದ್ದಾರೆ’ ಎಂದು ಶಹತಾಜ್ ತಿಳಿಸಿದ್ದಾರೆ.

‘ಮಾಜಿ ರಾಜಕಾರಣಿಗಳು ಬದುಕಬಾರದೇ? ಮೋದಿ ಅವರೇ ನೀವು ಕೆಲ ವರ್ಷಗಳ ನಂತರ ಮಾಜಿ ಆಗುತ್ತೀರಿ, ಅವಾಗ ನಿಮಗೂ ಹೀಗೆಯೇ ಆದರೆ? ಪೊಲೀಸರು ಮಾತ್ರ ಸಾರ್ವಭೌಮರೇ? ನನಗಾದ ಅನ್ಯಾಯದ ಬಗ್ಗೆ ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ಅವರಿಗೂ ತಿಳಿಸಿದ್ದೇನೆ. ಆದರೂ ನ್ಯಾಯ ಸಿಗಲಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT