ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬನಿಗೇ 52 ಸಾವಿರ ಮೌಲ್ಯದ ಮದ್ಯ ಮಾರಾಟ: ಅಂಗಡಿ ವಿರುದ್ಧ ಪ್ರಕರಣ

Last Updated 5 ಮೇ 2020, 11:02 IST
ಅಕ್ಷರ ಗಾತ್ರ

ಬೆಂಗಳೂರು: ನಿಗದಿತ ಮಿತಿ ಮೀರಿ ಮದ್ಯ ಮಾರಿದ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು, ಗ್ರಾಹಕರೊಬ್ಬರಿಗೆ ₹ 50 ಸಾವಿರಕ್ಕಿಂತಲೂ ಅಧಿಕ ಮೌಲ್ಯದ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ತಾವರೆಕೆರೆ ಮುಖ್ಯ ರಸ್ತೆಯಲ್ಲಿರುವ ವೆನಿಲಾ ಸ್ಪಿರಿಟ್‌ ಜೋನ್‌ ವಿರುದ್ಧ ಎಫ್‌ಐಆರ್‌ ಹಾಕಲಾಗಿದೆ.

42 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟ ಭರಾಟೆಯಿಂದ ಆರಂಭವಾಗಿದ್ದು ಸೋಮವಾರ ₹ 45 ಕೋಟಿ ಮೌಲ್ಯದ ವಹಿವಾಟು ನಡೆದಿದೆ. ವೆನಿಲಾ ಸ್ಪಿರಿಟ್‌ ಜೋನ್‌ನಲ್ಲಿ ಗ್ರಾಹಕರೊಬ್ಬರಿಗೆ ₹52,841 ಮೌಲ್ಯದ ಮದ್ಯ ಮಾರಿರುವ ಬಿಲ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಅಬಕಾರಿ ಇಲಾಖೆಯ ನಿಯಮದ ಪ್ರಕಾರ ಮದ್ಯದ ಅಂಗಡಿಗಳು ‍ಪ್ರತಿ ಗ್ರಾಹಕನಿಗೆ ಗರಿಷ್ಠ 2.3 ಲೀಟರ್‌ ಭಾರತೀಯ ತಯಾರಿಕೆ ಮದ್ಯ (ಐಎಂಎಲ್‌) ಮತ್ತು 18.2 ಲೀಟರ್‌ ಬಿಯರ್‌ ಮಾರಲು ಅವಕಾಶವಿದೆ. ಇದಕ್ಕಿಂತ ಹೆಚ್ಚು ಮಾರಾಟ ಮಾಡಿದರೆ ಸನ್ನದು ರದ್ದುಪಡಿಸಲು ಅಬಕಾರಿ ಕಾಯ್ದೆಯಡಿ ಅಧಿಕಾರ ಇದೆ.

ಈಗ ಲಭ್ಯವಾಗಿರುವವೆನಿಲಾ ಸ್ಪಿರಿಟ್‌ ಜೋನ್‌ನ ಮಾರಾಟದ‌ ಬಿಲ್‌ ಪ್ರಕಾರ 17.4 ಲೀಟರ್‌ ಐಎಂಎಲ್‌ ಹಾಗೂ 35.7 ಲೀಟರ್‌ ಬಿಯರ್‌ ಮಾರಾಟ ಮಾಡಲಾಗಿದೆ. ಈ ಅಂಗಡಿಯವರು ಅಬಕಾರಿ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಾಣುವಂತಿದೆ ಎಂದು ದಕ್ಷಿಣ ವಿಭಾಗದ ಅಬಕಾರಿ ಉಪ ಆಯುಕ್ತ ಗಿರಿ ಜೆ. ತಿಳಿಸಿದ್ದಾರೆ. ಆದರೆ, ಈ ಕುರಿತ ಪ್ರತಿಕ್ರಿಯೆಗೆ ಅಂಗಡಿ ಮಾಲೀಕರು ಸಿಗಲಿಲ್ಲ.

ನಿಗದಿತ ಮಿತಿ ಮೀರಿ ಮದ್ಯ ಮಾರಿದ ಎರಡು, ಮೂರು ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. 2.3 ಲೀಟರ್ ಐಎಂಎಲ್‌ ಹಾಗೂ 18.2 ಲೀಟರ್‌ ಬಿಯರ್‌ಗಿಂತ ಅಧಿಕ ಪ್ರಮಾಣದಲ್ಲಿ ಒಬ್ಬರೇ ಗ್ರಾಹಕರಿಗೆ ಮಾರಿರುವ ಎಲ್ಲ ಪ್ರಕರಣಗಳಲ್ಲೂ ಕೇಸ್‌ ಹಾಕಲಾಗುವುದು ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಕಮಿಷನರ್‌ ರಾಜೇಂದ್ರ ಪ್ರಸಾದ್‌ ಹೇಳಿದ್ದಾರೆ.

ಷರತ್ತು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿವೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT