ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ | ಶಸ್ತ್ರಚಿಕಿತ್ಸೆ ಸ್ಥಗಿತ; 12 ಸಾವಿರ ರೋಗಿಗಳು ಸಂಕಷ್ಟದಲ್ಲಿ

ಅನುಮತಿಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ‘ಮಿಂಟೊ’ ಕಣ್ಣಾಸ್ಪತ್ರೆ ನಿರ್ದೇಶಕರಿಂದ ಪತ್ರ
Last Updated 13 ಸೆಪ್ಟೆಂಬರ್ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಬಂದ ಮೇಲೆ ಮಿಂಟೊ ಕಣ್ಣಾಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ, ಆರು ತಿಂಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಡರೋಗಿಗಳು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ನೇತ್ರಾಧಿಕಾರಿಗಳು ಹೇಳಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌, ಶಸ್ತ್ರಚಿಕಿತ್ಸೆ ಮತ್ತೆ ಆರಂಭಿಸುವ ಬಗ್ಗೆ ಆಸ್ಪತ್ರೆಯ ಅಧೀಕ್ಷಕರು, ಸ್ಥಾನೀಯ ವೈದ್ಯಾಧಿಕಾರಿಗಳು, ಘಟಕದ ಮುಖ್ಯಸ್ಥರ ಜೊತೆ ಚರ್ಚಿಸಿದ್ದಾರೆ. ಎಲ್ಲರೂ ಒಪ್ಪಿದ ಕಾರಣ ತಕ್ಷಣದಿಂದ ಶಸ್ತ್ರಚಿಕಿತ್ಸೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆ. 26ರಂದು ಪತ್ರ ಬರೆದಿದ್ದಾರೆ.

ಅಲ್ಲದೆ, ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಯಲ್ಲಿ ಮೀಸಲಿಟ್ಟಿರುವ 100 ಹಾಸಿಗೆಗಳನ್ನು ಇನ್ನು ಮುಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ದಾಖಲಾಗುವ ಒಳರೋಗಿಗಳಿಗೆ ಉಪಯೋಗಿಸಲು ಅವಕಾಶ ನೀಡಬೇಕು ಎಂದೂ ಪತ್ರದಲ್ಲಿ ಕೋರಿದ್ದಾರೆ. ಈವರೆಗೂ ಯಾವುದೇ ಕೋವಿಡ್‌ ರೋಗಿಯೂ ಮಿಂಟೊ ಆಸ್ಪತ್ರೆಗೆ ದಾಖಲಾಗಿಲ್ಲ.

‘ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳಿರುವ ಮಿಂಟೊದಲ್ಲಿ ಹೊರರೋಗಿ, ಒಳರೋಗಿ ಚಿಕಿತ್ಸೆಯನ್ನು ಮಾರ್ಚ್‌ 23ರಿಂದಲೇ ಸ್ಥಗಿತಗೊಳಿಸಲಾಗಿದೆ. ಪಿಜಿ ಮತ್ತು ಫೆಲೋಶಿಪ್ ಕೋರ್ಸ್ ಕೂಡಾ ನಿಲ್ಲಿಸಲಾಗಿದೆ. ಟೆಲಿ ಕನ್ಸಲ್ಟೇಷನ್‌ ಮೂಲಕ ರೋಗಿಗಳಿಗೆ ಸಲಹೆಗಳನ್ನು ನೀಡಲಾಗುತ್ತಿದೆ. ಹೊರರೋಗಿಗಳ ಮತ್ತು ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ಪರೀಕ್ಷೆಯನ್ನು ಜೂನ್‌ 22ರಿಂದ ಮತ್ತೆ ಆರಂಭಿಸಲಾಗಿದೆ’ ಎಂದು ಮಿಂಟೊ ಆಸ್ಪತ್ರೆಯ ನೇತ್ರಾಧಿಕಾರಿಯೂ ಆಗಿರುವ ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ (ಎನ್‌ಒಎ) ಅಧ್ಯಕ್ಷ ಡಾ.ಎಂ. ವೆಂಕಟೇಶ್ ತಿಳಿಸಿದರು.

‘ಮಿಂಟೊದಲ್ಲಿ 25 ವರ್ಷಗಳಿಂದ ಪ್ರತಿದಿನ 70 ರಿಂದ 80 ಜನರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈಗ ಸ್ಥಗಿತಗೊಳಿಸಿದ್ದರಿಂದ 12 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ವಂಚಿತರಾಗಿದ್ದಾರೆ. ಹೀಗೆ ಉಳಿದಿರುವ ಶಸ್ತ್ರಚಿಕಿತ್ಸೆಯ ಜೊತೆಗೆ ನಿತ್ಯ ಬರುವ ರೋಗಿಗಳನ್ನೂ ಸೇರಿಸಿಕೊಂಡರೆ ಮೂರ್ನಾಲು ವರ್ಷಗಳ ಅವಧಿಯಲ್ಲಿ ಈ ಎಲ್ಲ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟ’ ಎಂದರು.

‘ಮಿಂಟೊ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆಯಾಗಿರುವುದರಿಂದ ಕರ್ನಾಟಕವಷ್ಟೇ ಅಲ್ಲದೆ, ನೆರೆ ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಕಣ್ಣಿನ ಪೊರೆ, ಮಧುಮೇಹ, ರಕ್ತದೊತ್ತಡ ಹೆಚ್ಚಿದ ಕಾರಣ ಆಗುವ ಕಣ್ಣಿನೊಳಗಿನ ರಕ್ತಸ್ರಾವ, ಕಣ್ಣಿನ ನರ‌ದ ದುರ್ಬಲತೆ, ಗ್ಲುಕೋಮಾ ರೋಗಗಳಿಗೆ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ನೀಡದಿದ್ದರೆ ಶಾಶ್ವತ ಅಂಧತ್ವ ಖಚಿತ’ ಎಂದು ವಿವರಿಸಿದರು.

ಎನ್‌ಪಿಸಿಬಿ ಹಮ್ಮಿಕೊಳ್ಳಬೇಕು

ಬಡರೋಗಿಗಳು ಶಾಶ್ವತವಾಗಿ ಅಂಧರಾಗುವ ಆತಂಕ ವ್ಯಕ್ತಪಡಿಸಿರುವ ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘ (ಎನ್‌ಒಎ), ‘ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ’ (ಎನ್‌ಪಿಸಿಬಿ) ಹಮ್ಮಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವೈದ್ಯಕೀಯ ಶಿಕ್ಚಣ ಸಚಿವ ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದಿದೆ.

***

ಶಸ್ತ್ರಚಿಕಿತ್ಸೆ ಮತ್ತೆ ಆರಂಭಿಸುವ ಬಗ್ಗೆ ತಜ್ಞರ ಜೊತೆ ಚರ್ಚಿಸಿದ್ದು, ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಶೀಘ್ರ ತೀರ್ಮಾನಿಸಲಾಗುವುದು ಡಾ.ಕೆ. –ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

***

ಕಣ್ಣಿನ ಪೊರೆಯೂ ಸೇರಿದಂತೆ ಹಲವು ದೃಷ್ಟಿದೋಷಗಳಿಗೆ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕು. ಇಲ್ಲದೇ ಇದ್ದರೆ ಶಾಶ್ವತ ಅಂಧತ್ವ ಖಚಿತ
–ಎಂ. ವೆಂಕಟೇಶ್, ಅಧ್ಯಕ್ಷರು, ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT