ಸೋಮವಾರ, ಅಕ್ಟೋಬರ್ 21, 2019
24 °C
ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಸಿ.ಎಂ ರಾಜಕೀಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನಕಲಿ ಸಹಿ ಬಳಸಿ ಶಿಫಾರಸು ಪತ್ರ ಸೃಷ್ಟಿಸಲಾಗಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಕಲಿ ಪತ್ರದ ಬಗ್ಗೆ ವಿಶ್ವನಾಥ್ ಅವರೇ ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಕಾರ್ಯದರ್ಶಿ ಆಗಿರುವ ಬಿ.ಕೆ. ಚಂದ್ರಕಾಂತ್ ಅವರ ವರ್ಗಾವಣೆ ಸಂಬಂಧ ಈ ಪತ್ರ ಸೃಷ್ಟಿಸಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ಬಿ.ಕೆ.ಚಂದ್ರಕಾಂತ್ ಅವರು ನನಗೆ ಪರಿಚಿತರು. ವಯೋವೃದ್ಧ ತಂದೆ- ತಾಯಿ ಆರೋಗ್ಯದ ಕಡೆ ಗಮನಿಸಬೇಕಾದ ಕಾರಣ ಅವರನ್ನು ಬೆಂಗಳೂರು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಯೋಜನಾ ಅಧಿಕಾರಿ ಜಾಗಕ್ಕೆ ವರ್ಗಾವಣೆ ಮಾಡಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕೆಂದು ಈ ಮೂಲಕ ಕೋರುತ್ತೇನೆ’ ಎಂಬುದಾಗಿ ವಿಶ್ವನಾಥ್‌ ಹೆಸರಿನಲ್ಲಿ ಬರೆದಿರುವ ನಕಲಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಶಿಫಾರಸು ಪತ್ರ ಅಸಲಿ ಎಂದು ತಿಳಿದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವರ್ಗಾವಣೆ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯ ದರ್ಶಿಗೂ ಕಳುಹಿಸಿದ್ದರು. ಆ ವಿಷಯ ಈಚೆಗಷ್ಟೇ ವಿಶ್ವನಾಥ್ ಅವರಿಗೆ ಗೊತ್ತಾ ಗಿತ್ತು’ ಎಂದು ಪೊಲೀಸರು ಹೇಳಿದರು.

‘ಅನಾರೋಗ್ಯ ನಿಮಿತ್ತ ಚಂದ್ರಕಾಂತ್ ಅವರು ಸದ್ಯ ರಜೆ ಪಡೆದಿದ್ದಾರೆ. ಈ ಪತ್ರವನ್ನು ಅವರೇ ಸೃಷ್ಟಿಸಿದ್ದಾರೋ ಅಥವಾ ಬೇರೆ ಯಾರಾದರೂ ಸೃಷ್ಟಿಸಿ ದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸರು ತಿಳಿಸಿದರು.

Post Comments (+)